ನವದೆಹಲಿ: ಇರಾನ್ ಜೊತೆಗೆ ವ್ಯಾಪಾರ ವಹಿವಾಟು ನಡೆಸುವ ರಾಷ್ಟ್ರಗಳ ಮೇಲೆ ಶೇ.25ರಷ್ಟು ಹೆಚ್ಚುವರಿ ಸುಂಕ ವಿಧಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ ಬೆನ್ನಲ್ಲೇ, ಭಾರತೀಯ ಮಾರುಕಟ್ಟೆಯಲ್ಲಿ ತೀವ್ರ ಆತಂಕ ಸೃಷ್ಟಿಯಾಗಿದೆ. ಈ ನಿರ್ಧಾರ ಜಾರಿಯಾದರೆ ಭಾರತದ ಮೇಲಿನ ಒಟ್ಟು ಸುಂಕದ ಹೊರೆ ಶೇ.75ರಷ್ಟಾಗುವ ಸಾಧ್ಯತೆಯಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ.
ಏನಿದು ಸುಂಕದ ಲೆಕ್ಕಾಚಾರ?
ಅಮೆರಿಕದ ಪ್ರಸ್ತಾವಿತ ಶೇ.25ರಷ್ಟು ಸುಂಕವು ಮೇಲ್ನೋಟಕ್ಕೆ ನಿರ್ವಹಿಸಬಹುದಾದಂತೆ ಕಂಡರೂ, ವಾಸ್ತವದಲ್ಲಿ ಇದು ಹಳೆಯ ಸುಂಕಗಳಿಗೆ ಸೇರ್ಪಡೆಯಾಗಲಿದೆ. ಪ್ರಸ್ತುತ ಅಸ್ತಿತ್ವದಲ್ಲಿರುವ ಸುಂಕಗಳ ಮೇಲೆ ಈ ಹೊಸ ಸುಂಕವನ್ನು ವಿಧಿಸಿದರೆ, ಅಮೆರಿಕಕ್ಕೆ ರಫ್ತಾಗುವ ಭಾರತದ ಉತ್ಪನ್ನಗಳ ಮೇಲಿನ ಒಟ್ಟು ತೆರಿಗೆ ಹೊರೆ ಶೇ.50 ರಿಂದ ಶೇ.75ರವರೆಗೆ ಏರಿಕೆಯಾಗುವ ಸಾಧ್ಯತೆಯಿದೆ.
ಚಾಯ್ಸ್ ವೆಲ್ತ್‌ನ ಸಂಶೋಧನಾ ಮುಖ್ಯಸ್ಥ ಅಕ್ಷತ್ ಗಾರ್ಗ್ ಅವರ ಪ್ರಕಾರ, “ಈ ಪ್ರಸ್ತಾವಿತ ಸುಂಕವು ಅಮೆರಿಕದ ವಿದೇಶಾಂಗ ನೀತಿಗೆ ಬದ್ಧರಾಗದ ದೇಶಗಳ ಮೇಲೆ ಒತ್ತಡ ಹೇರುವ ತಂತ್ರವಾಗಿದೆ. ಈಗಾಗಲೇ ಶೇ.50ರಷ್ಟು ಸುಂಕ ಎದುರಿಸುತ್ತಿರುವ ದೇಶಗಳಿಗೆ ಇದು ಗಾಯದ ಮೇಲೆ ಬರೆ ಎಳೆದಂತಾಗುತ್ತದೆ,” ಎಂದು ವಿಶ್ಲೇಷಿಸಿದ್ದಾರೆ.
ಮಾರುಕಟ್ಟೆ ಮೇಲಾಗುವ ಪರಿಣಾಮವೇನು?
ವೆಲ್ತ್‌ಮಿಲ್ಸ್ ಸೆಕ್ಯುರಿಟೀಸ್‌ನ ನಿರ್ದೇಶಕ ಕ್ರಾಂತಿ ಬತ್ತಿನಿ ಅವರ ಪ್ರಕಾರ, ಅಮೆರಿಕದ ಈ ನಡೆಯು ಜಾಗತಿಕ ಮಾರುಕಟ್ಟೆಗಳಲ್ಲಿ ಮತ್ತು ಭಾರತದಲ್ಲಿ ಒತ್ತಡ ಸೃಷ್ಟಿಸುತ್ತಿದೆ. ಅಮೆರಿಕದ ಈ ಘೋಷಣೆಯಿಂದ ಮಾರುಕಟ್ಟೆಯಲ್ಲಿ ತಕ್ಷಣದ ಅಸ್ಥಿರತೆ ಉಂಟಾಗಬಹುದು. ಜಾಗತಿಕವಾಗಿ ತೈಲ ಪೂರೈಕೆ ಹೆಚ್ಚಾಗಿರುವುದರಿಂದ ಮತ್ತು ವೆನೆಜುವೆಲಾ ತೈಲ ಮಾರುಕಟ್ಟೆಗೆ ಲಭ್ಯವಿರುವುದರಿಂದ, ದೀರ್ಘಕಾಲೀನ ಪರಿಣಾಮ ತಟಸ್ಥವಾಗಿರಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಭಾರತವು ಇರಾನ್‌ನೊಂದಿಗೆ ದೀರ್ಘಕಾಲದ ವಾಣಿಜ್ಯ ಮತ್ತು ಇಂಧನ ಸಂಬಂಧವನ್ನು ಹೊಂದಿದೆ. ಈ ಹಿಂದೆ ರೂಪಾಯಿ ಮೂಲಕವೂ ಪಾವತಿ ವ್ಯವಹಾರ ನಡೆಸಲಾಗಿದೆ. ಹೀಗಾಗಿ ಇರಾನ್ ಮೇಲಿನ ನಿರ್ಬಂಧಗಳು ಬಿಗಿಯಾದಾಗಲೆಲ್ಲಾ ಭಾರತದ ಮೇಲೆ ಅದರ ನೇರ ಪ್ರಭಾವ ಬೀರುತ್ತದೆ. ಹೂಡಿಕೆದಾರರು ಸದ್ಯ ಬಜೆಟ್ ಮತ್ತು ಕಂಪನಿಗಳ ತ್ರೈಮಾಸಿಕ ಫಲಿತಾಂಶಗಳತ್ತ ಚಿತ್ತ ಹರಿಸಿದ್ದು, ಅಮೆರಿಕದ ನೀತಿ ಸ್ಪಷ್ಟವಾಗುವವರೆಗೂ ಎಚ್ಚರಿಕೆಯ ಹೆಜ್ಜೆ ಇಡುತ್ತಿದ್ದಾರೆ.
ಇದನ್ನೂ ಓದಿ : ‘ಇರಾನ್‌ನಲ್ಲಿ ಭಾರತೀಯ ವಿದ್ಯಾರ್ಥಿಗಳು ಸುರಕ್ಷಿತ’ | ಆತಂಕ ದೂರ ಮಾಡಿದ ರಾಯಭಾರಿ ಡಾ. ಮೊಹಮ್ಮದ್ ಫತಾಲಿ!



















