50 ಕೋಟಿ ಆಫರ್ ನಾವು ನೀಡುತ್ತಿಲ್ಲ. ಇವರೇ ಕೇಳುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮಾತನಾಡಿದ್ದಾರೆ.
ಕಾಂಗ್ರೆಸ್ ನವರಿಗೆ ಅಭಿವೃದ್ಧಿಗೆ ಕೊಡೋಕೆ ಅನುದಾನ ಸಿಗುತ್ತಿಲ್ಲ. ಹೀಗಾಗಿ ನಮ್ಮನ್ನೇ ದುಡ್ಡು ಕೊಡಿ ಎಂದು ಕೇಳುತ್ತಿದ್ದಾರೆ. ಸಿದ್ದರಾಮಯ್ಯ ಅವರು ಸಿಎಂ ಸ್ಥಾನಕ್ಕೆ ಯಾವ ಕ್ಷಣದಲ್ಲಿ ಬೇಕಾದರೂ ರಾಜೀನಾಮೆ ಕೊಡಬಹುದು. ಕಾಂಗ್ರೆಸ್‌ನಲ್ಲಿ ಸಿಎಂ ಹುದ್ದೆಗೆ ಪೈಪೋಟಿ ನಡೆಯುತ್ತಿದೆ. ಕೆಲ ಶಾಸಕರೇ ಅನುದಾನದ ವಿಚಾರವಾಗಿ ಅಸಮಾಧಾನಗೊಂಡಿದ್ದಾರೆ. ಹೀಗಾಗಿ ಯಾವ ಕ್ಷಣದಲ್ಲಿ ಆದರೂ ಸಿಎಂ ರಾಜೀನಾಮೆ ಕೊಡಬಹುದು ಎಂದಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ವಿಜಯೇಂದ್ರ, ನಿಮ್ಮ ಈ ಹೇಳಿಕೆ ಕಾಂಗ್ರೆಸ್ ಶಾಸಕರುಗಳನ್ನು ಅಂಕೆಯಲಿಟ್ಟುಕೊಳ್ಳಲು, ನಿಮ್ಮನ್ನು ಸುತ್ತುವರೆದಿರುವ ಭ್ರಷ್ಟಾಚಾರದ ಹಗರಣಗಳನ್ನು ಮುಚ್ಚಿಕೊಳ್ಳಲು ಹೆಣೆದಿರುವ ಹತಾಶೆಯ ಸುಳ್ಳಿನ ಕಂತೆ ಎಂದು ಆರೋಪಿಸಿದ್ದಾರೆ.
ಮುಖ್ಯಮಂತ್ರಿಯಂತಹ ಜವಾಬ್ದಾರಿ ಸ್ಥಾನದಲ್ಲಿ ಕುಳಿತಿರುವ ನೀವು ಅದರ ಘನತೆಯನ್ನು ಕುಗ್ಗಿಸುವ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದೀರಿ. ನಿಮ್ಮದೇ ಸರ್ಕಾರವಿದೆ, ನಿಮ್ಮದೇ ತನಿಖಾ ಸಂಸ್ಥೆಗಳಿವೆ, 50 ಕೋಟಿ ಆಮಿಷದ ಮೂಲ ಯಾವುದು ಎನ್ನುವುದನ್ನು ಜನರ ಮುಂದೆ ಬಹಿರಂಗಪಡಿಸುವುದು ನಿಮ್ಮ ನೈತಿಕ ಜವಾಬ್ದಾರಿ ಎಂದು ಗುಡುಗಿದ್ದಾರೆ.