ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ಮಧ್ಯೆ ಟಿ20 ಟೂರ್ನಿ ನಡೆಯುತ್ತಿದ್ದು, 2ನೇ ಟಿಂ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡದ ಆರಂಭಿಕ ಆಟಗಾರ ಮ್ಯಾಥ್ಯೂ ಶಾರ್ಟ್ ಹೊಸ ವಿಶ್ವ ದಾಖಲೆ ಬರೆದಿದ್ದಾರೆ.
ಆರಂಭಿಕ ಆಟಗಾರ ರನ್ ಗಳಿಸುವುದರಲ್ಲಿ ದಾಖಲೆ ಬರೆದರೆ ಓಕೆ. ಆದರೆ, ಈ ಆಟಾಗರ ಈಗ ಬೌಲಿಂಗ್ ನಲ್ಲಿಯೂ ದಾಖಲೆ ಬರೆದಿದ್ದಾರೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡಕ್ಕೆ ಮ್ಯಾಥ್ಯೂ ಶಾರ್ಟ್ (28) ಹಾಗೂ ಟ್ರಾವಿಸ್ ಹೆಡ್ (31) ಭರ್ಜರಿ ಆರಂಭ ನೀಡಿದರು. ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿಯುವ ಯುವ ಸ್ಪೋಟಕ ದಾಂಡಿಗ ಜೇಕ್ ಪ್ರೇಸರ್ ಮೆಕ್ ಗುರ್ಕ್ 31 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 4 ಫೋರ್ ಗಳೊಂದಿಗೆ ಅರ್ಧಶತಕ ಸಿಡಿಸಿದರು. ಇವರ ಅರ್ಧ ಶತಕದ ಸಹಾಯದಿಂದ ಆಸ್ಟ್ರೇಲಿಯಾ ತಂಡವು 20 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 193 ರನ್ ಗಳಿಸಿತು.
ಕಠಿಣ ಗುರಿ ಬೆನ್ನಟ್ಟಿದ ಇಂಗ್ಲೆಂಡ್ ತಂಡ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿತು. ಇನ್ನೊಂದೆಡೆ ಆಸ್ಟ್ರೇಲಿಯಾ ತಂಡದ ಹಂಗಾಮಿ ನಾಯಕ ಟ್ರಾವಿಸ್ ಹೆಡ್ ಅವರು ಮ್ಯಾಥ್ಯೂ ಶಾರ್ಟ್ ಗೆ ಬೌಲಿಂಗ್ ಮಾಡಲು ಹೇಳಿದರು. ಸ್ಪಿನ್ ಮೋಡಿ ಮಾಡಿದ ಶಾರ್ಟ್ ಇಂಗ್ಲೆಂಡ್ ತಂಡಕ್ಕೆ ಆಘಾತದ ನೀಡಿದರು. ಈ ವೇಳೆ ಉತ್ತಮ ರನ್ ಗಳಿಸಿ, ಜಯದ ಹಾದಿಯತ್ತ ಇದ್ದ ಇಂಗ್ಲೆಂಡ್ ಆಟಗಾರರು ಕೊಂಚ ಗಲಿಬಿಲಿ ಗೊಂಡರು.
3 ಓವರ್ ಗಳನ್ನು ಎಸೆದಿರುವ ಮ್ಯಾಥ್ಯೂ ಶಾರ್ಟ್ ಕೇವಲ 22 ರನ್ ನೀಡಿ 5 ವಿಕೆಟ್ ಗಳಿದರು. ಈ ಐದು ವಿಕೆಟ್ ಗಳೊಂದಿಗೆ ಟಿ20 ಕ್ರಿಕೆಟ್ ನಲ್ಲಿ 5 ವಿಕೆಟ್ ಪಡೆದ ಪೂರ್ಣ ಸದಸ್ಯ ರಾಷ್ಟ್ರದ ಮೊದಲ ಆರಂಭಿಕ ಬ್ಯಾಟರ್ ಎಂಬ ದಾಖಲೆಯನ್ನೂ ಬರೆದರು. ಈ ಸಾಧನೆ ಮಾಡಿದ ಆಸೀಸ್ ತಂಡದ ಮೊದಲ ಓಪನರ್ ಎಂಬ ದಾಖಲೆಯನ್ನೂ ಬರೆದರು.
ಮ್ಯಾಥ್ಯೂ ಶಾರ್ಟ್ 5 ವಿಕೆಟ್ ಗಳಿಸಿದ ಮಧ್ಯೆಯೂ ಇಂಗ್ಲೆಂಡ್ ಗೆಲುವಿನ ನಗೆ ಬೀರಿತು. ಲಿಯಾಮ್ ಲಿವಿಂಗ್ ಸ್ಟೋನ್ ಅಬ್ಬರಿಸಿದರು. ಕೇವಲ 47 ಎಸೆತಗಳಲ್ಲಿ 5 ಸಿಕ್ಸ್ ಹಾಗೂ 6 ಫೋರ್ ಗಳೊಂದಿಗೆ 87 ರನ್ ಗಳಿಸಿದರು. ಪರಿಣಾಮ ಇಂಗ್ಲೆಂಡ್ ತಂಡ 19 ಓವರ್ ಗಳಲ್ಲಿ 194 ರನ್ ಗಳಿಸಿ 3 ವಿಕೆಟ್ ಗಳಿಂದ ಜಯ ಸಾಧಿಸಿತು.