ಬೊಗಸೆಯಂತಹ ಕಣ್ಣುಗಳು, ಮುಖದ ತುಂಬ ಯಾವಾಗಲೂ ನಗು, ಮನೋಜ್ಞ ನಟನೆ, ಅತ್ಯದ್ಭುತ ವ್ಯಕ್ತಿತ್ವ, ಯಾರು ಬೇಕಾದರೂ ಪೂಜ್ಯನೀಯ ಭಾವದಿಂದ ಕಾಣಬಹುದಾದ ವ್ಯಕ್ತಿತ್ವ, ಹಿತವಾದ ಮಾತು, ನವಿಲಿನಂಥ ನಡೆ… ಹೌದು ಇಷ್ಟೆಲ್ಲ ಗುಣಗಳು ಬಿ.ಸರೋಜಾದೇವಿ ಎಂಬ “ಅಭಿನಯ ಸರಸ್ವತಿ’’ ಅವರಲ್ಲಿ ಮಾತ್ರ ನೆಲೆಸಿದ್ದವು. ದೇಶದ ಪ್ರಮುಖ ನಟರೊಂದಿಗೆ ನಟಿಸಿದರೂ, ತಾಯಿ ನೆಲ ಕರುನಾಡು, ತಾಯಿ ಭಾಷೆ ಕನ್ನಡದಲ್ಲಿ ಅಪಾರವಾದ ಸಾಧನೆಯನ್ನು ಅಚ್ಚೊತ್ತಿದ್ದ ಬಿ.ಸರೋಜಾದೇವಿ ಅವರು ನಮ್ಮನ್ನೆಲ್ಲ ಅಗಲಿ, ಬದುಕಿನ ಗಮ್ಯ ಸೇರಿದ್ದಾರೆ. ಆದ್ರೆ, ಅವರು ನಮ್ಮನ್ನು ಅಗಲಿದರೂ, ಅವರ ಪಾತ್ರಗಳು, ಅಪ್ರತಿಮ ಅಭಿನಯ, ಮನಮೋಹಕ ವ್ಯಕ್ತಿತ್ವವು ಕನ್ನಡಿಗರ ಎದೆಯಾಳದಲ್ಲಿ ಅಚ್ಚಳಿಯದೆ ಉಳಿಯಲಿವೆ.
ಚನ್ನಪಟ್ಟಣದ ‘ಬೊಂಬೆ’ ಈ ಸರೋಜಾದೇವಿ
ಬಾಲ್ಯದಿಂದಲೇ ಹಾಡು, ನೃತ್ಯ ಎಂದರೆ ಅಚ್ಚುಮೆಚ್ಚು
ಶ್ರೀರಾಮ ಪೂಜಾ ಎಂಬ ಸಿನಿಮಾ ಮೂಲಕ ಸಿನಿಮಾ ಪ್ರವೇಶ
ಬೊಂಬೆಗಳ ನಾಡು ಚನ್ನಪಟ್ಟಣ ತಾಲೂಕು ದಶವಾರ ಗ್ರಾಮದಲ್ಲಿ ಜನಿಸಿದ ಬಿ.ಸರೋಜಾದೇವಿ ಅವರಿಗೆ ಬಾಲ್ಯದಿಂದಲೂ ಹಾಡು, ನೃತ್ಯ ಎಂದರೆ ಅಚ್ಚುಮೆಚ್ಚಾಗಿತ್ತು. ಬೆಂಗಳೂರಿನ ಸೇಂಟ್ ಥೆರೆಸಾ ಶಾಲೆಯಲ್ಲಿ ಓದಿದ ಸರೋಜಾದೇವಿ ಅವರಿಗೆ ಬಣ್ಣದ ಬದುಕು ಅರಸಿ ಬಂದಿತು. ಹಾಗಾಗಿ, ಚಿಕ್ಕವಯಸ್ಸಿನಲ್ಲೇ ಅವರು “ಶ್ರೀರಾಮ ಪೂಜಾ” ಎಂಬ ಸಿನಿಮಾದಲ್ಲಿ ನಟಿಸುವ ಮೂಲಕ ಬೆಳ್ಳಿತೆರೆಯನ್ನು ಪ್ರವೇಶಿಸಿದರು. ಅಲ್ಲಿಂದ, ಸರೋಜಾದೇವಿ ಅವರು ಹಿಂತಿರುಗಿ ನೋಡಲೇ ಇಲ್ಲ.
ಗಾಯಕಿಯಾಗುತ್ತಾರೆ ಎಂದವರು ನಟಿಯಾದರು
ನಟನೆ ಬಿಟ್ಟು ಶಾಲೆಗೆ ಹೋಗುವ ಇಚ್ಛೆಯೂ ಇತ್ತು
ರಾಷ್ಟ್ರಪ್ರಶಸ್ತಿ ಬಂದಿದ್ದು ಬದುಕಿಗೆ ತಿರುವು ನೀಡಿತು
ಶಾಲೆಯಲ್ಲಿದ್ದಾಗಲೇ ಹಾಡು, ನೃತ್ಯದಿಂದ ಸರೋಜಾದೇವಿ ಅವರು ಖ್ಯಾತಿ ಗಳಿಸಿದ್ದರು. ಬೆಂಗಳೂರಿನಲ್ಲಿರೋ ಪುರಭವನದಲ್ಲಿ ಅವರು ಹಾಡಿದ ಹಿಂದಿ ಗೀತೆ ಕೇಳಿ ಖ್ಯಾತ ನಟ ಹೊನ್ನಪ್ಪ ಭಾಗವತರ್ ಮನಸೋತಿದ್ದರು. ಈಕೆ ಹಿನ್ನೆಲೆ ಗಾಯಕಿ ಆಗ್ತಾರೆ ಅಂತ ಅವರು ಭಾವಿಸಿದ್ದದರು. ಆದ್ರೆ, ಸರೋಜಾದೇವಿ ಅವರ ಸೌಂದರ್ಯ ನೋಡಿ, ‘ಮಹಾಕವಿ ಕಾಳಿದಾಸ’ ಚಿತ್ರದ ನಟನೆಗೆ ಆಹ್ವಾನವಿತ್ತರು. ಕು.ರಾ. ಸೀತಾರಾಮ ಶಾಸ್ತ್ರಿ ಆ ಸಿನಿಮಾದ ನಿರ್ದೇಶಕರಾಗಿದ್ದರು. ಅದರಂತೆ ಸರೋಜಾದೇವಿ ಅವರು ‘ಮಹಾಕವಿ ಕಾಳಿದಾಸ’ ಸಿನಿಮಾದಲ್ಲಿ ನಟಿಸಿದ್ರು. ತಂದೆ-ತಾಯಿಗೆ ಸಿನಿಮಾ ಇಷ್ಟವಿರದ ಕಾರಣ ಸರೋಜಾದೇವಿ ಅವರು ಮತ್ತೆ ಶಾಲೆಗೆ ಹೋಗಲು ತೀರ್ಮಾನಿಸಿದ್ದರು. ಆದ್ರೆ, ‘ಮಹಾಕವಿ ಕಾಳಿದಾಸ’ ಸಿನಿಮಾಗೆ ರಾಷ್ಟ್ರಪ್ರಶಸ್ತಿ ಬಂದ ಕಾರಣ ಇವರು ಬಣ್ಣದ ಬದುಕನ್ನೇ ಮುಂದುವರಿಸಿದ್ರು.

ಕನ್ನಡದ ದಿಗ್ಗಜ ನಟರೊಂದಿಗೆ ಸರೋಜಾದೇವಿ ನಟನೆ
ರಾಜ್ ಕುಮಾರ್, ಕಲ್ಯಾಣ್ ಕುಮಾರ್ ಜತೆ ತೆರೆ ಹಂಚಿಕೆ
“ನಿಮಗೇಕೆ ಕೊಡಬೇಕು ಕಪ್ಪ” ಎಂಬ ಡೈಲಾಗ್ ಈಗಲೂ ಜನಪ್ರಿಯ
ಮಹಾಕವಿ ಕಾಳಿದಾಸ ಸಿನಿಮಾ ಬಳಿಕ ಸರೋಜಾದೇವಿ ಅವರಿಗೆ ಹಲವು ಅವಕಾಶಗಳ ಬಾಗಿಲು ತೆರೆದವು. ಅದರಲ್ಲೂ, ನಾಡಿನ ಕುಮಾರತ್ರಯ ನಟರಾದ ರಾಜ್ ಕುಮಾರ್, ಉದಯ ಕುಮಾರ್, ಕಲ್ಯಾಣ್ ಕುಮಾರ್ ಅವರೊಟ್ಟಿಗೆ ನಟಿಸಿ ಸೈ ಎನಿಸಿಕೊಂಡರು. ಅಣ್ಣಾವ್ರ ಜತೆ ಸಾಲು ಸಾಲು ಸಿನಿಮಾ ಮಾಡಿದರು. ‘ಅಣ್ಣ ತಂಗಿ’ ಚಿತ್ರದಲ್ಲಿನ ದೇಸಿ ಸೊಗಡಿನ ಮಾತಿನಲ್ಲಿ ಇಬ್ಬರದ್ದೂ ಜುಗಲ್ಬಂದಿ. ‘ಭಾಗ್ಯವಂತರು’ ಚಿತ್ರದಲ್ಲಿನ ಭಾವತೀವ್ರತೆಯ ಕ್ಷಣಗಳನ್ನು ಇಬ್ಬರೂ ಜೀವಿಸಿರುವುದು ಕಣ್ಣಿಗೆ ಕಟ್ಟಿದಂತಿದೆ. ‘ಮಲ್ಲಮ್ಮನ ಪವಾಡ’, ‘ಬಬ್ರುವಾಹನ’ ಇವೆಲ್ಲವೂ ಸರೋಜಾದೇವಿ ನಟನಾಸಾಮರ್ಥ್ಯದ ನಿದರ್ಶನಗಳು, ಕಿತ್ತೂರು ರಾಣಿ ಚೆನ್ನಮ್ಮನಾಗಿ ಅವರು ‘ನಿಮಗೇಕೆ ಕೊಡಬೇಕು ಕಪ್ಪ’ ಎಂದು ಹೇಳಿರುವ ಸಂಭಾಷಣೆ ಈಗಲೂ ಅಚ್ಚಹಸಿರಾಗಿದೆ.
ಬೇರೆ ಭಾಷೆಗಳಿಗೂ ಕಾಲಿಟ್ಟರು ಸರೋಜಾದೇವಿ
ತಮಿಳು, ತೆಲುಗಿನಲ್ಲೂ ನಟನೆ ಮೂಲಕ ಖ್ಯಾತಿ
ಇವರು ತಮಿಳಿನಲ್ಲಿ “ಕನ್ನಡದ ಅರಗಿಣಿ” ಎಂದೇ ಫೇಮಸ್
ಕನ್ನಡದಲ್ಲಿ ನಟಿಸಿ ಸೈ ಎನಿಸಿಕೊಂಡ, ಅಪಾರ ಖ್ಯಾತಿ ಗಳಿಸಿದ ಸರೋಜಾದೇವಿ ಅವರಿಗೆ ಬೇರೆ ಭಾಷೆಗಳ ಸಿನಿಮಾಗಳೂ ಅರಸಿ ಬಂದವು. ಅದರಲ್ಲೂ, ತಮಿಳು ದಂತಕತೆ ಎಂಜಿಆರ್, ಶಿವಾಜಿ ಗಣೇಶನ್, ತೆಲುಗಿನ ಎನ್ ಟಿ ಆರ್ ಸಿನಿಮಾಗಳಲ್ಲಿ ನಟಿಸಿ ಅಲ್ಲೂ ಮನೆಮಾತಾದರು. ತಮಿಳಿನಲ್ಲಿ ಪಾಟ್ಟಾಲಿ ಮುತ್ತು, ಪಡಿಕಥ ಮೇಥೈ, ಕಲ್ಯಾಣ ಪರಿಸು, ತೆಲುಗಿನಲ್ಲಿ ಪಂಡರಿ ಭಕ್ತಲು, ದಕ್ಷಯಜ್ಞಂ, ಹಿಂದಿಯಲ್ಲಿ ಆಶಾ, ಮೆಹಂದಿ ಲಗಾ ಕೆ ರಖನಾ ಸೇರಿ ಹತ್ತಾರು ಮೊದಲಾದ ಸಿನಿಮಾಗಳಲ್ಲಿ ಅವರು ಬಣ್ಣ ಹಚ್ಚಿದರು. ಅದರಲ್ಲೂ, ತಮಿಳಿಗರಂತೂ ಇವರನ್ನು “ಕನ್ನಡದ ಅರಗಿಣಿ” ಎಂದು ಕರೆದು ಹಾಡಿ ಹೊಗಳಿದರು.
ನಾಲ್ಕು ದಶಕಗಳವರೆಗೆ ಸಿನಿಮಾ ರಂಗದಲ್ಲಿ ಪಾರಮ್ಯ
200ಕ್ಕೂ ಅಧಿಕ ಸಿನಿಮಾಗಳಲ್ಲಿ ನಟನೆ, ಹತ್ತಾರು ಪ್ರಶಸ್ತಿ
ಇಂತಹ ಅಭಿನಯ ಶಾರದೆಗೆ ಭಾವಪೂರ್ಣ ವಿದಾಯ
ನಾಲ್ಕು ದಶಕಗಳವರೆಗೆ ಸಿನಿಮಾ ರಂಗದಲ್ಲಿ ಮಿಂಚಿದ್ದ ಶಾರದಾದೇವಿ ಅವರ ಅಗಲಿಕೆಗೆ ದೇಶದ ಸಿನಿಮಾ ರಂಗವೇ ಕಂಬನಿ ಮಿಡಿದಿದೆ. ಐದು ಭಾಷೆಗಳಲ್ಲಿ 200ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದ ಇವರಿಗೆ ಪದ್ಮಶ್ರೀ, ಪದ್ಮಭೂಷಣ, ರಾಜ್ಯೋತ್ಸವ ಪ್ರಶಸ್ತಿ, ಎಂ.ಜಿ.ಆರ್. ಪ್ರಶಸ್ತಿ, ಎನ್.ಟಿ.ಆರ್. ಪ್ರಶಸ್ತಿ, ಬೆಂಗಳೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಸೇರಿ ಹಲವು ಪ್ರಶಸ್ತಿಗಳು ಲಭಿಸಿದ್ದವು.
ಹೀಗೆ, ಪುಟ್ಟ ಹಳ್ಳಿಯಲ್ಲಿ ಜನಿಸಿ, ಪಂಚ ಭಾಷೆಗಳ ಸಿನಿಮಾ ರಂಗದಲ್ಲಿ ಮಿಂಚಿ, ಕನ್ನಡವನ್ನು ಹೃದಯದಲ್ಲಿಟ್ಟುಕೊಂಡು ಆರಾಧಿಸಿದ್ದ ಎವರ್ ಗ್ರೀನ್ ಸುಂದರಿ ಬಿ.ಸರೋಜಾದೇವಿ ಇನ್ನು ನೆನಪು ಮಾತ್ರ ಎಂಬುದು ಕನ್ನಡಿಗರಿಗೆ, ಸಿನಿಪ್ರಿಯರಿಗೆ ಅರಗಿಸಿಕೊಳ್ಳಲು ಆಗ್ತಿಲ್ಲ. ಆದರೂ, ಬೊಗಸೆ ಕಂಗಳ ಚೆಲುವೆ ಎಂದಿಗೂ ಬೆಳ್ಳಿತೆರೆಯ ಮೂಲಕ ಅಮರ ಎಂಬುದರಲ್ಲಿ ಎರಡು ಮಾತಿಲ್ಲ.



















