ಬೆಂಗಳೂರು: ವ್ಯಕ್ತಿಯೊಬ್ಬ ಆಪ್ ಡೌನ್ ಲೋಡ್ ಮಾಡಿಕೊಂಡು 5.6 ಲಕ್ಷ ರೂ.ಕಳೆದುಕೊಂಡಿರುವ ಘಟನೆ ನಡೆದಿದೆ.
ನಗರದ ಬ್ಯಾಟರಾಯನಪುರದಲ್ಲಿ ಈ ಘಟನೆ ನಡೆದಿದೆ. ಸಂಚಾರ ನಿಯಮ ಉಲ್ಲಂಘನೆಯ ಚಲನ್ಗಳು ಬಾಕಿ ಇವೆ ಎಂದು ವಾಟ್ಸ್ಆ್ಯಪ್ನಲ್ಲಿ ಬಂದ ಸಂದೇಶ ನಂಬಿದ ವ್ಯಕ್ತಿ ಇಷ್ಟೊಂದು ಹಣ ಕಳೆದುಕೊಂಡಿದ್ದಾರೆ. ಫೆ. 20ರಂದು ಈ ಘಟನೆ ನಡೆದಿದೆ. ಅಪರಿಚಿತ ವ್ಯಕ್ತಿಯಿಂದ ಬಂದ ಸಂದೇಶ ನಂಬಿ, ಈ ವ್ಯಕ್ತಿ ಹಣ ಕಳೆದುಕೊಂಡಿದ್ದಾರೆ.
ವಾಟ್ಸ್ಆ್ಯಪ್ ಸಂದೇಶದಲ್ಲಿ ಏನಿತ್ತು?
ನಿಮ್ಮ ವಾಹನಕ್ಕೆ ಸಂಚಾರ ನಿಯಮ ಉಲ್ಲಂಘನೆಯ ದಂಡ ವಿಧಿಸಲಾಗಿದೆ. ಅದಕ್ಕೆ ಸಂಬಂಧಿಸಿದ ಪುರಾವೆಗಳನ್ನು ಪರಿಶೀಲಿಸಲು ಇಲ್ಲಿ ನೀಡಿದ ಲಿಂಕ್ ಮೂಲಕ ‘‘ವಾಹನ್ ಪರಿವಾಹನ್’’ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ ಎಂದು ವಾಟ್ಸ್ಆ್ಯಪ್ ನಲ್ಲಿ ಸಂದೇಶ ಬಂದಿದೆ. ವಾಹನದ ನೋಂದಣಿ ಸಂಖ್ಯೆ ಕೂಡ ಅಲ್ಲಿ ಉಲ್ಲೇಖಿಸಲಾಗಿದೆ. ನಿಮ್ಮ ವಾಹನಕ್ಕೆ ಸಂಚಾರ ನಿಯಮ ಉಲ್ಲಂಘನೆಯ ದಂಡ ವಿಧಿಸಲಾಗಿದ್ದು, ಅದರ ಕುರಿತಾದ ಪುರಾವೆಗಳನ್ನು ಅಥವಾ ಸಿಸಿಟಿವಿ ಕ್ಯಾಮರಾ ಸೆರೆಹಿಡಿದಿರುವ ಚಿತ್ರಗಳು ಇಲ್ಲಿವೆ. ಅದನ್ನು ಪರಿಶೀಲಿಸಬೇಕಾದಲ್ಲಿ ಅಥವಾ ಒಂದು ವೇಳೆ ನೀವು ನಿಯಮ ಉಲ್ಲಂಘಿಸದಿದ್ದಲ್ಲಿ ಆ ಬಗ್ಗೆ ಅಪ್ಡೇಟ್ ಮಾಡಲು ಇಲ್ಲಿ ನೀಡಿರುವ ಲಿಂಕ್ ಮೂಲಕ ‘‘ವಾಹನ್ ಪರಿವಾಹನ್’’ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ ಎಂದು ಸಂದೇಶ ಬಂದಿದೆ.
ವಾಹನದ ನೋಂದಣಿ ಸಂಖ್ಯೆ ಸರಿಯಾಗಿಯೇ ಇದ್ದುದರಿಂದ ಆ ವ್ಯಕ್ತಿ ಎಪಿಕೆ ಫೈಲ್ ಡೌನ್ಲೋಡ್ ಮಾಡಿ ಇನ್ಸ್ಟಾಲ್ ಮಾಡಿದ್ದಾರೆ. 24 ಗಂಟೆಯ ಅವಧಿಯಲ್ಲಿ ಅವರಿಗೆ ಗೊತ್ತಾಗದಂತೆ ಅವರ ಕ್ರೆಡಿಟ್ ಕಾರ್ಡ್‌ಗಳಿಂದ 5.6 ಲಕ್ಷ ರೂ. ಡೆಬಿಟ್ ಆಗಿದೆ. ಆನಂತರ ಫೋನ್ ಹ್ಯಾಕ್ ಆಗಿದೆ ಎಂಬುವುದನ್ನು ಅರಿತ ವ್ಯಕ್ತಿ, ಫೆ. 22ರಂದು ಪಶ್ಚಿಮ ಸಿಇಎನ್ ಪೊಲೀಸರಿಗೆ ಘಟನೆಯ ಬಗ್ಗೆ ದೂರು ನೀಡಿದ್ದಾರೆ. ಇದರ ಆಧಾರದಲ್ಲಿ ಎಫ್‌ಐಆರ್ ದಾಖಲಾಗಿದೆ.