ಬೆಂಗಳೂರು: ಕನ್ನಡ ಚಿತ್ರರಂಗದ ಪ್ರಚಾರಕರ್ತ ದಿ. ಡಿ.ವಿ. ಸುಧೀಂದ್ರ ಅವರ ರಾಘವೇಂದ್ರ ಚಿತ್ರವಾಣಿ ಸಂಸ್ಥೆಯ 49ನೇ ವಾರ್ಷಿಕೋತ್ಸವ ಹಾಗೂ 24ನೇ ವರ್ಷದ ಪ್ರಶಸ್ತಿ ಪ್ರದಾನ ಸಮಾರಂಭ ಭಾನುವಾರ ನಡೆದಿದ್ದು, ಹಲವು ಸಿನಿಮಾ ಸಾಧರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಈ ವೇಳೆ ಮಾತನಾಡಿದ ಸಿಎಂ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್, “ಸೊಸೆ ತಂದ ಸೌಭಾಗ್ಯ” ಸಿನಿಮಾದಿಂದ ಪಿಆರ್ ಓ ಕ್ಷೇತ್ರಕ್ಕೆ ಆಗಮಿಸಿದ ರಾಘವೇಂದ್ರ ಚಿತ್ರವಾಣಿ ಈಗ ಕನ್ನಡ ಚಿತ್ರರಂಗದ ಸೌಭಾಗ್ಯವಾಗಿ ಬೆಳೆದಿದೆ ಎಂದು ಹಾಡಿ ಹೊಗಳಿದರು.

ಈ ವೇಳೆ ಚಿತ್ರರಂಗದ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಹಿರಿಯ ನಿರ್ಮಾಪಕರಾದ ಮೀನಾಕ್ಷಿ ಕೆ.ವಿ. ಜಯರಾಂ ಅವರಿಗೆ ಶ್ರೀ ರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ, ಹಿರಿಯ ಪತ್ರಕರ್ತ ಕೆ.ಜೆ. ಕುಮಾರ್ ಅವರಿಗೆ ರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ, ಅನುರಾಧಾ ಭಟ್ ಅವರಿಗೆ ಅತ್ತ್ಯುತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿಯಾಗಿರುವ ಡಾ. ರಾಜಕುಮಾರ್ ಪ್ರಶಸ್ತಿಯನ್ನು ನೀಡಲಾಯಿತು.
ಹಿರಿಯ ನಿರ್ದೇಶಕ ಓಂಪ್ರಕಾಶ್ ರಾವ್ ಅವರಿಗೆ ಯಜಮಾನ ಚಿತ್ರದ ಖ್ಯಾತಿಯ ಆರ್. ಶೇಷಾದ್ರಿ ಸ್ಮರಣಾರ್ಥ ಪ್ರಶಸ್ತಿ ನೀಡಲಾಯಿತು. ಹಿರಿಯ ನಟಿ ರೇಖಾರಾವ್ ಅವರಿಗೆ ನಟಿ ಡಾ. ಜಯಮಾಲ ಎಚ್.ಎಂ. ರಾಮಚಂದ್ರ ಪ್ರಶಸ್ತಿ, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರಿಗೆ ಎಂ.ಎಸ್. ರಾಮಯ್ಯ ಮೀಡಿಯಾ ಅಂಡ್ ಎಂಟರ್ಟೈನ್ಮೆಂಟ್ ಪ್ರೈ ಲಿ ಪ್ರಶಸ್ತಿ (ಅತ್ಯುತ್ತಮ ಸಂಗೀತ ನಿರ್ದೇಶನ), ‘ಕೃಷ್ಣಂ ಪ್ರಣಯ ಸಖಿ’ ಚಿತ್ರಕ್ಕಾಗಿ, ಶಿವಮ್ಮ ಚಿತ್ರದ ಉತ್ತಮ ಕಥಾಲೇಖನಕ್ಕಾಗಿ ಜೈಶಂಕರ್ ಆರ್ಯರ್ ಅವರಿಗೆ ಖ್ಯಾತ ನಿರ್ದೇಶಕ-ನಿರ್ಮಾಪಕ ಕೆ.ವಿ. ಜಯರಾಂ ಪ್ರಶಸ್ತಿ, “ಇಬ್ಬನಿ ತಬ್ಬಿದ ಇಳೆಯಲಿ” ಚಿತ್ರದ ಸಂಭಾಷಣೆಗಾಗಿ ಚಂದ್ರಜಿತ್ ಬೆಳ್ಳಿಯಪ್ಪ ಅವರಿಗೆ ಖ್ಯಾತ ಚಿತ್ರಸಾಹಿತಿ ಹುಣಸೂರು ಕೃಷ್ಣಮೂರ್ತಿ ಸ್ಮರಣಾರ್ಥ ಪ್ರಶಸ್ತಿ, “ಫೋಟೊ” ಚಿತ್ರದ ಚೊಚ್ಚಲ ನಿರ್ದೇಶನಕ್ಕಾಗಿ ಉತ್ಸವ್ ಗೋನ್ವಾರ್ ಅವರಿಗೆ ಬಿ. ಸುರೇಶ ಅವರು ನೀಡುವ ಪ್ರಶಸ್ತಿ, “ಕೃಷ್ಣಂ ಪ್ರಣಯ ಸಖಿ” ಚಿತ್ರದ “ದ್ವಾಪರ” ಹಾಡಿನ ಗೀತರಚನೆಗಾಗಿ ಡಾ. ವಿ.ನಾಗೇಂದ್ರ ಪ್ರಸಾದ್ ಅವರಿಗೆ ಹಿರಿಯ ಪತ್ರಕರ್ತ .ಪಿ.ಜಿ. ಶ್ರೀನಿವಾಸಮೂರ್ತಿ ಅವರ ಸ್ಮರಣಾರ್ಥ ಪ್ರಶಸ್ತಿ ಪತ್ರಕರ್ತ ವಿನಾಯಕರಾಮ್ ಅವರು ನೀಡುವ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಂ ನರಸಿಂಹಲು, ಕನ್ನಡ ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್, ಹಿರಿಯ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ಹಿರಿಯ ಪತ್ರಕರ್ತೆ ವಿಜಯಮ್ಮ, ಇಂದ್ರಜಿತ್ ಲಂಕೇಶ್, ಪತ್ರಕರ್ತ ಸದಾಶಿವ ಶೆಣೈ, ನಟಿ ರಾಗಿಣಿ ದ್ವಿವೇದಿ, ಸಂಜಯ್ ಗೌಡ ಸೇರಿದಂತೆ ಹಲವರು ಕಾರ್ಯಕ್ರಮಕ್ಕೆ ಆಗಮಿಸಿದ್ದರು.
