ಬೆಂಗಳೂರು: ಕೆಲವು ವಾರಗಳ ಹಿಂದೆ, ಟಾಟಾ ಮೋಟಾರ್ಸ್ ತನ್ನ ಕರ್ವ್ ಕೂಪ್ ಎಸ್‌ಯುವಿಯ ಮೂಲಕ ಸಾಧನೆಯೊಂದನ್ನು ಮಾಡಿತ್ತು. ಒಟ್ಟು ಮೂರು ಟಾಟಾ ಟ್ರಕ್‌ಗಳನ್ನು ಎಳೆಯುವ ಮೂಲಕ ಶಕ್ತಿ ಪ್ರದರ್ಶನ ಮಾಡಿತ್ತು. ಈಗ, ಕಂಪನಿಯು ಮತ್ತೊಂದು ಇದೇ ರೀತಿಯ ವಿಡಿಯೋ ಹಂಚಿಕೊಂಡಿದೆ. ಈ ಬಾರಿ ಟಾಟಾ ಕರ್ವ್ ಕಾರು, 48,000 ಕೆ.ಜಿ ತೂಕದ ಬೋಯಿಂಗ್ 737 ವಿಮಾನವನ್ನು ಎಳೆದಿದೆ. 110.24 ಮೀಟರ್ ದೂರ ವಿಮಾನ ಎಳೆಯುವ ಮೂಲಕ ಭಾರತೀಯ ದಾಖಲೆ ನಿರ್ಮಿಸಿದೆ.
ಸಾಧನೆಯ ವಿಡಿಯೋವನ್ನು ಟಾಟಾ ಮೋಟಾರ್ಸ್ ಕಾರುಗಳ ಅಧಿಕೃತ ಚಾನೆಲ್‌ನಲ್ಲಿ ಹಂಚಿಕೊಳ್ಳಲಾಗಿದೆ. ಸಣ್ಣ ಅವಧಿಯ ವಿಡಿಯೋದಲ್ಲಿ, ಟಾಟಾ ಕರ್ವ್. ಬೋಯಿಂಗ್ 737 ಎಳೆದುಕೊಮಡು ಸಾಗುವ ದೃಶ್ಯವಿದೆ. ಇದನ್ನು ತಿರುವನಂತಪುರಂನ ವಿಮಾನ ನಿಲ್ದಾಣದಲ್ಲಿ ಮಾಡಲಾಗಿದೆ. ಕರ್ವ್ ಸಲೀಸಾಗಿ ವಿಮಾನ ಎಳೆದಿದೆ.
ಟಾಟಾ ಕರ್ವ್ನಿಂದ ಭಾರತೀಯ ದಾಖಲೆ
ಟಾಟಾ ಮೋಟಾರ್ಸ್, ವಿಮಾನ ಎಳೆಯಲು ಟಿಜಿಡಿಐ ಎಂಜಿನ್ ಹೊಂದಿರುವ ಪೆಟ್ರೋಲ್ ಕಾರನ್ನು ಬಳಸಿದೆ. ಈ ದಾಖಲೆ ಪ್ರಕಾರ, ಪೆಟ್ರೋಲ್ ಚಾಲಿತ ಎಸ್‌ಯುವಿಯು 48 ಟನ್ ತೂಕದ ಪ್ರಯಾಣಿಕ ವಿಮಾನವನ್ನು 110.24 ಮೀಟರ್ ದೂರಕ್ಕೆ ಎಳೆದಿರುವುದು ಇದೇ ಮೊದಲು.
ಮೂರು ಟಾಟಾ ಟ್ರಕ್‌ಗಳನ್ನು ಎಳೆದಿದ್ದ ಕರ್ವ್
ಟಾಟಾ ಕರ್ವ್ ವಿಮಾನ ಎಳೆಯುವ ಮೊದಲು ಒಟ್ಟು 42,000 ಕೆ.ಜಿ ತೂಕದ ಮೂರು ಟಾಟಾ ಟ್ರಕ್‌ಗಳನ್ನು ಸಹ ಯಶಸ್ವಿಯಾಗಿ ಎಳೆದಿತ್ತು. ಈ ಪ್ರಯೋಗದಲ್ಲಿಯೂ ಟಾಟಾ ಕರ್ವ್ನ 1.2 ಲೀಟರ್ ಹೈಪೀರಿಯನ್ ಟಿಜಿಡಿಐ ಪೆಟ್ರೋಲ್ ಎಂಜಿನ್ ಬಳಸಲಾಗಿತ್ತು. ಖಾಲಿ ರಸ್ತೆಯಲ್ಲಿ ಈ ಟ್ರಕ್‌ಗಳನ್ನು ಸುಲಭವಾಗಿ ಎಳೆದಿತ್ತು.
ಟಾಟಾ ಮೋಟಾರ್ಸ್ ಕರ್ವ್ ಕೂಪ್ ಎಸ್‌ಯುವಿ ಕಳೆದ ವರ್ಷ ಬಿಡುಗಡೆಗೊಂಡಿದ್ದು, 1.2 ಲೀಟರ್ ಹೈಪೀರಿಯನ್ ಟಿಜಿಡಿಐ ಪೆಟ್ರೋಲ್ ಎಂಜಿನ್ ಒಳಗೊಂಡಿದೆ. ಈ ಎಂಜಿನ್ 123 ಎಚ್ಪಿ ಪವರ್ ಮತ್ತು 225 ಎನ್‌ಎಮ್ ಟಾರ್ಕ್ ಉತ್ಪಾದಿಸುತ್ತದೆ. ಟ್ರಾನ್ಸ್‌ಮಿಷನ್ ಆಯ್ಕೆಗಳಾಗಿ 6 ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಮತ್ತು 7 ಸ್ಪೀಡ್ ಡಿಸಿಟಿ ಲಭ್ಯವಿದೆ.
ಟರ್ಬೊ ಎಂಜಿನ್ ಕೂಡ ಇದೆ
ಟಾಟಾ ಮೋಟಾರ್ಸ್ ಕರ್ವ್ ಅನ್ನು ಕ್ರೈಯೋಜೆಟ್ 1.5 ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯೊಂದಿಗೆ ಸಹ ನೀಡುತ್ತಿದೆ. ಈ ಎಂಜಿನ್ 116 ಎಚ್ಪಿ ಶಕ್ತಿ ಮತ್ತು 260 ಎನ್‌ಎಮ್ ಟಾರ್ಕ್ ಉತ್ಪಾದಿಸುತ್ತದೆ. ಜೊತೆಗೆ 1.2 ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್ ಮತ್ತೊಂದು ಆಯ್ಕೆಯಾಗಿದೆ. ಇದು 118 ಎಚ್ಪಿ ಶಕ್ತಿ ಮತ್ತು 170 ಎನ್‌ಎಮ್ ಟಾರ್ಕ್ ಉತ್ಪಾದಿಸುತ್ತದೆ.
ಟಾಟಾ ಕರ್ವ್ ಕೂಪ್ ಎಸ್‌ಯುವಿಯ ಪ್ರಾರಂಭಿಕ ಬೆಲೆ ರೂ. 9.99 ಲಕ್ಷ ಆಗಿದ್ದು, ಗರಿಷ್ಠ ರೂ. 19.20 ಲಕ್ಷವರೆಗೆ ಇದೆ. ಈ ಎಸ್‌ಯುವಿಯು ಹಲವು ವಿಶೇಷ ಫೀಚರ್ಗಳನ್ನು ಒದಗಿಸುತ್ತದೆ, ಪನಾರಮಿಕ್ ಸನ್‌ರೂಫ್, 12.3 ಇಂಚಿನ ಟಚ್ ಸ್ಕ್ರೀನ್ ನೊಂದಿಗೆ ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ಪ್ಲೇ ಇದೆ.
ಈ ವಾಹನದಲ್ಲಿ 9 ಸ್ಪೀಕರ್ ಸಂಗೀತ ಮ್ಯೂಸಿಕ್ ವ್ಯವಸ್ಥೆ ಇದೆ. 10.25 ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಪ್ಯಾನಲ್, ವೈರ್‌ಲೆಸ್ ಚಾರ್ಜರ್ ಹೊಂದಿದೆ. ಪ್ರಸ್ತುತ, ಈ ಕಾರು ಭಾರತದ ಮಾರುಕಟ್ಟೆಯಲ್ಲಿ ಸಿಟ್ರೊನ್ ಬಸಾಲ್ಟ್ ಮಾದರಿಯೊಂದಿಗೆ ಸ್ಪರ್ಧಿಸುತ್ತಿದೆ.