ಪಾಟ್ನಾ: ಪವಿತ್ರ ಸ್ನಾನಕ್ಕೆ ತೆರಳಿದ್ದ 37 ಮಕ್ಕಳು ಸೇರಿದಂತೆ 46 ಜನ ಸಾವನ್ನಪ್ಪಿರುವ ಘಟನೆ ಬಿಹಾರದಲ್ಲಿ ನಡೆದಿದೆ.
‘ಜೀವಿತ್ ಪುತ್ರಿಕಾ’ ಹಬ್ಬದ ಹಿನ್ನೆಲೆಯಲ್ಲಿ ಪವಿತ್ರ ಸ್ನಾನ ಕೈಗೊಂಡಿದ್ದ ವೇಳೆ ಈ ಘನಟೆ ನಡೆದಿದೆ. ಪವಿತ್ರ ಹಬ್ಬದ ಅಂಗವಾಗಿ ವಿವಿಧ ನದಿಗಳು ಹಾಗೂ ಕೊಳಗಳಲ್ಲಿ ಪವಿತ್ರ ಸ್ನಾನಕ್ಕೆ ತೆರಳಿದ್ದಾಗ 37 ಮಕ್ಕಳು, ನಾಲ್ವರು ಮಹಿಳೆಯರು ಸೇರಿದಂತೆ 46 ಜನ ಸಾವನ್ನಪ್ಪಿದ್ದಾರೆ. ಅಲ್ಲದೇ, ಮೂವರು ನಾಪತ್ತೆಯಾಗಿದ್ದಾರೆ ಎಂದು ಬಿಹಾರ ಸರ್ಕಾರ ಹೇಳಿದೆ.
ಈಗಾಗಲೇ 43 ಜನರ ಮೃತದೇಹ ಹೊರತೆಗೆಯಲಾಗಿದ್ದು, ಉಳಿದವರ ಪತ್ತೆ ಕಾರ್ಯ ಮುಂದುವರಿಸಲಾಗಿದೆ ಎಂದು ಅಲ್ಲಿನ ಅಧಿಕಾರಿಗಳು ಹೇಳಿದ್ದಾರೆ. ಹಿಂದಿನ ವರ್ಷ ನಡೆದಿದ್ದ ಇದೇ ಹಬ್ಬದಲ್ಲಿ ಪುಣ್ಯ ಸ್ನಾನಕ್ಕೆ ತೆರಳಿದ್ದ ವೇಳೆ 15 ಮಕ್ಕಳು ಸೇರಿದಂತೆ 22 ಜನ ಮುಳುಗಿ ಸಾವನ್ನಪ್ಪಿದ್ದರು. ಆದರೆ, ಈ ವರ್ಷ 46 ಜನ ಸಾವನ್ನಪ್ಪಿದ್ದಾರೆ.
ಈ ಘಟನೆಗೆ ಕಂಬನಿ ಮಿಡಿದ ಸಿಎಂ ನಿತೀಶ್ ಕುಮಾರ್, ಸಂತ್ರಸ್ತ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದ್ದಾರೆ. ಮೃತರ ಕುಟುಂಬಗಳಿಗೆ ತಲಾ 4 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.