ಪ್ರಯಾಗರಾಜ್: ಉತ್ತರ ಪ್ರದೇಶದ ಪ್ರಯಾಗರಾಜ್ ನಲ್ಲಿ ನಡೆಯುತ್ತಿದ್ದ ಮಹಾ ಕುಂಭಮೇಳವು ಸಂಪನ್ನಗೊಂಡಿದೆ. ಸುಮಾರು 45 ದಿನಗಳವರೆಗೆ ತ್ರಿವೇಣಿ ಸಂಗಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಂದ ಹಿಡಿದು ಸಾಮಾನ್ಯ ಜನರವರೆಗೆ ಕೋಟ್ಯಂತರ ಜನ ಪುಣ್ಯಸ್ನಾನ ಮಾಡಿದ್ದಾರೆ. ಇದರೊಂದಿಗೆ ವಿಶ್ವದ ಬೃಹತ್ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಒಂದಾದ ಮಹಾ ಕುಂಭಮೇಳವು ಸಮಾರೋಪಗೊಂಡಂತಾಗಿದೆ.
ಮಹಾ ಕುಂಭಮೇಳ ಸಂಪನ್ನಗೊಂಡ ಹಿನ್ನೆಲೆಯಲ್ಲಿ ಸಿಎಂ ಯೋಗಿ ಆದಿತ್ಯನಾಥ್ ಅವರು ಪೋಸ್ಟ್ ಮಾಡಿದ್ದಾರೆ. “45 ದಿನಗಳ ಮಹಾ ಕುಂಭಮೇಳ ಸಂಪನ್ನಗೊಂಡಿದ್ದು, ಸುಮಾರು 66.21 ಕೋಟಿ ಭಕ್ತರು ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಿದ್ದಾರೆ. ಜಗತ್ತಿನ ಇತಿಹಾಸದಲ್ಲಿ ಇದು ಮೈಲುಗಲ್ಲು ಸೃಷ್ಟಿಸುವ ಧಾರ್ಮಿಕ ಕಾರ್ಯಕ್ರಮವಾಗಿದೆ” ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಇದರಿಂದ ಉತ್ತರ ಪ್ರದೇಶದಲ್ಲಿ 3 ಲಕ್ಷ ಕೋಟಿ ರೂ. ಆದಾಯ ಸೃಷ್ಟಿಯಾಗಿದೆ ಎಂದು ತಿಳಿದುಬಂದಿದೆ.
ಜನವರಿ 13ರಿಂದ ಆರಂಭ
ಜನವರಿ 13ರಿಂದ ಮಹಾ ಕುಂಭಮೇಳವು ನಡೆಯಿತು. ಮೊದಲ ದಿನವೇ 1.7 ಕೋಟಿ ಮಂದಿ ಪುಣ್ಯಸ್ನಾನ ಮಾಡಿದರು. ಮಕರ ಸಂಕ್ರಾಂತಿ ದಿನವಾದ ಜನವರಿ 14ರಂದು 3.5 ಕೋಟಿ ಜನ ಮಿಂದೆದ್ದರು. ಇನ್ನು, ಮೌನಿ ಅಮಾವಾಸ್ಯೆಯ ದಿನ 8 ಕೋಟಿ ಭಕ್ತರು ಪುಣ್ಯಸ್ನಾನ ಮಾಡಿದ್ದು ದಾಖಲೆಯಾಯಿತು. ಕುಂಭಮೇಳದ ಕೊನೆಯ ದಿನವಾದ ಫೆಬ್ರವರಿ 26ರಂದು ಒಂದು ಕೋಟಿಗೂ ಅಧಿಕ ಜನ ಮಿಂದೆದ್ದಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.
ದುರಂತ, ಸಾವುಗಳಿಗೂ ಮಹಾ ಕುಂಭಮೇಳ ಸಾಕ್ಷಿಯಾಯಿತು. ಜನವರಿ 29ರಂದು ನಡೆದ ಕಾಲ್ತುಳಿತದಲ್ಲಿ 30 ಭಕ್ತರು ನಿಧನರಾದರು. ಇದರ ಹೊರತುಪಡಿಸಿ ಮಹಾ ಕುಂಭಮೇಳದ ವೇಳೆ ಕೆಲ ಮಳಿಗೆಗಳಲ್ಲಿ ಅಗ್ನಿ ಅವಘಡ ಸಂಭವಿಸಿದವು. ಇದರಿಂದ ಯಾವುದೇ ಸಾವು-ನೋವು ಸಂಭವಿಸಲಿಲ್ಲ. ಮಹಾ ಕುಂಭಮೇಳಕ್ಕೆ ರಾಜ್ಯ ಸರ್ಕಾರವು 7,500 ಕೋಟಿ ರೂ. ವ್ಯಯಿಸಿ, ಸಮರ್ಪಕ ಮೂಲ ಸೌಕರ್ಯ ಯೋಜನೆಗಳನ್ನು ನೀಡಿದೆ.