ಐಪಿಎಲ್ ಮೆಗಾ ಹರಾಜಿನ ಹಲವು ನಿಯಮಗಳನ್ನು ಈಗ ಬಿಸಿಸಿಐ ಘೋಷಿಸಿದೆ. ಈ ಬಾರಿ ಒಟ್ಟು 6 ಆಟಗಾರರನ್ನು ಉಳಿಸಿಕೊಳ್ಳಬಹುದು. ಈ 6 ಜನ ಆಟಗಾರರಲ್ಲಿ ಐವರನ್ನು ನೇರವಾಗಿ ಆಯ್ಕೆ ಮಾಡಿದರೆ, ಓರ್ವನ ಮೇಲೆ ರೈಟ್ ಟು ಮ್ಯಾಚ್ (RTM) ಕಾರ್ಡ್ ಬಳಸಿಕೊಳ್ಳಬಹುದು. ಹೀಗಾಗಿ ಮೆಗಾ ಹರಾಜಿಗೂ ಮುನ್ನ ಪ್ರತಿ ಫ್ರಾಂಚೈಸಿಗಳಿಗೆ 5+1 ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶ ನೀಡಲಾಗಿದೆ.
ಫ್ರಾಂಚೈಸಿಗಳು ಬಯಸಿದರೆ ಐವರು ಭಾರತೀಯರನ್ನು ಅಥವಾ ಐವರನ್ನು ವಿದೇಶಿ ಆಟಗಾರರನ್ನು ಬೇಕಿದ್ದರೂ ರಿಟೈನ್ ಮಾಡಿಕೊಳ್ಳಬಹುದು. ಅನ್ ಕ್ಯಾಪ್ಡ್ ಆಟಗಾರನನ್ನು (ರಾಷ್ಟ್ರೀಯ ತಂಡದ ಪರ ಆಡದ ಪ್ಲೇಯರ್) ಉಳಿಸಿಕೊಳ್ಳಲು ಬಯಸಿದರೆ ಕೇವಲ ಇಬ್ಬರನ್ನು ಮಾತ್ರ ಆಯ್ಕೆ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ಇಬ್ಬರಿಗಿಂತ ಹೆಚ್ಚಿನ ಅನ್ಕ್ಯಾಪ್ಡ್ ಆಟಗಾರರು ಇರಬಾರದು ಎಂದು ಬಿಸಿಸಿಐ ತಿಳಿಸಿದೆ.
ಫ್ರಾಂಚೈಸಿಯೊಂದು ಐವರು ಆಟಗಾರರನ್ನು ರಿಟೈನ್ ಮಾಡಿಕೊಳ್ಳಲು ಮುಂದಾದರೆ ಮೊದಲ ಆಟಗಾರನಿಗೆ 18 ಕೋಟಿ, ಎರಡನೇ ಆಟಗಾರನಿಗೆ 14 ಕೋಟಿ, ಮೂರನೇ ಆಟಗಾರನಿಗೆ 11 ಕೋಟಿ, ನಾಲ್ಕನೇ ಆಟಗಾರನಿಗೆ 18 ಕೋಟಿ, ಐದನೇ ಆಟಗಾರನಿಗೆ 14 ಕೋಟಿ ರೂ. ನೀಡಬೇಕಾಗುತ್ತದೆ. ಹರಾಜು ಮೊತ್ತದಿಂದ 75 ಕೋಟಿ ರೂ. ಅನ್ನು ರಿಟೈನ್ ಮಾಡಿದ ಆಟಗಾರರಿಗೆ ನೀಡಬೇಕಾಗುತ್ತದೆ. ಈ ಮೊತ್ತವನ್ನು ಒಟ್ಟು ಮೆಗಾ ಹರಾಜು ಮೊತ್ತದಿಂದ ಕಡಿತ ಮಾಡಲಾಗುತ್ತದೆ.
ಉಳಿದ 45 ಕೋಟಿ ರೂ. ನಲ್ಲಿ ಉಳಿದ 13 ರಿಂದ 20 ಆಟಗಾರರನ್ನು ಖರೀದಿಸಬೇಕಾಗುತ್ತದೆ. ಒಂದು ತಂಡದಲ್ಲಿ 18 ಆಟಗಾರರು ಇರಬೇಕಿರುವುದು ಕಡ್ಡಾಯ. ಗರಿಷ್ಠ 25 ಆಟಗಾರರನ್ನು ಹೊಂದಬಹುದು. ಇಲ್ಲಿ ಐವರನ್ನು ಉಳಿಸಿಕೊಂಡರೆ ಉಳಿದ 45 ಕೋಟಿ ರೂ.ನಲ್ಲಿ 13 ಆಟಗಾರರನ್ನು ಖರೀದಿಸಲೇಬೇಕು. ರಿಟೈನ್ ಆಟಗಾರರ ಸಂಭಾವನೆ ಹೆಚ್ಚಳ ಮಾಡಿರುವುದರಿಂದ ಐಪಿಎಲ್ ಫ್ರಾಂಚೈಸಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ.