ಬೆಂಗಳೂರು: ಮಹಿಳೆಯರು ಹಾಗೂ ಮಕ್ಕಳ ರಕ್ಷಣೆಗಂತಲೇ ಅನೇಕ ಕಾನೂನುಗಳು, ಕಾಯ್ದೆಗಳಿದ್ದರೂ, ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೇ ಇವೆ. ಎರಡು ವರ್ಷ, ಏಳು ತಿಂಗಳಲ್ಲಿ ಮಹಿಳೆಯರು ಹಾಗೂ ಮಕ್ಕಳ ಮೇಲೆ 43,053 ದೌರ್ಜನ್ಯ ಪ್ರಕರಣಗಳು ರಾಜ್ಯದಲ್ಲಿ ದಾಖಲಾಗಿವೆ.
2023 ರಿಂದ 2025ರ ಜುಲೈ ಅವಧಿಯಲ್ಲಿ ಅತ್ಯಾಚಾರ, ಲೈಂಗಿಕ ಕಿರುಕುಳ, ವರದಕ್ಷಿಣೆ ಕಿರುಕುಳ ಹಾಗೂ ಸಾವು, ಪತಿಯಿಂದ ಕಿರುಕುಳ, ಪೋಕ್ಸೋ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ-2012), ಬಾಲ್ಯ ವಿವಾಹ, ಬಾಲ ಕಾರ್ಮಿಕ, ಮಕ್ಕಳ ರಕ್ಷಣೆ ಮತ್ತು ಆರೈಕೆ ಕಾಯ್ದೆ (ಜೆ.ಜೆ.ಕಾಯ್ದೆ) ಅಡಿ 43 ಸಾವಿರಕ್ಕೂ ಹೆಚ್ಚು ಮಹಿಳೆಯರು ಹಾಗೂ ಮಕ್ಕಳ ಮೇಲೆ ನಡೆದ ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ. ಈ ಪೈಕಿ ಮಹಿಳೆಯರಿಗೆ ಲೈಂಗಿಕ ಕಿರುಕುಳ, ವರದಕ್ಷಿಣೆ ಕಿರುಕುಳ ಹಾಗೂ ಪೋಕ್ಸೋ ಕಾಯ್ದೆ ಅಡಿಯಲ್ಲಿ ದಾಖಲಾದ ಪ್ರಕರಣಗಳ ಸಂಖ್ಯೆಯೇ ಹೆಚ್ಚಿದೆ ಎನ್ನುವುದು ಆಶ್ಚರ್ಯಕರ ಸಂಗತಿ.
ವೃತಿ ಕ್ಷೇತ್ರವನ್ನು ಒಳಗೊಂಡಂತೆ ಬೇರೆ ಬೇರೆ ಕಡೆಗಳಲ್ಲಿ ಮಹಿಳೆಯರಿಗೆ ಲೈಂಗಿಕ ಕಿರುಕುಳ ಆಗಿರುವುದಕ್ಕೆ ಸಂಬಂಧಿಸಿದಂತೆ 16,273 ಪ್ರಕರಣಗಳು ದಾಖಲಾಗಿವೆ. ವರದಕ್ಷಿಣೆ ಕಿರುಕುಳಕ್ಕೆ ಸಂಬಂಧಿಸಿದಂತೆ ಒಟ್ಟು 5,456 ಪ್ರಕರಣಗಳು ದಾಖಲಾಗಿದ್ದು, ವರದಕ್ಷಿಣೆ ಕಿರುಕುಳದಿಂದಲೇ 340 ಗೃಹಿಣಿಯರು ಮೃತಪಟ್ಟಿದ್ದಾರೆ. ಪತಿಯ ಕಿರುಕುಳಕ್ಕೆ ಸಂಬಂಧಿಸಿದಂತೆ 7,546 ಪ್ರಕರಣಗಳು ದಾಖಲಾಗಿವೆ ಎನ್ನುವುದು ಪೊಲೀಸ್ ಇಲಾಖೆಯ ಅಂಕಿ-ಅಂಶಗಳಿಂದ ತಿಳಿದು ಬಂದಿದೆ.
ಅತ್ಯಾಚಾರ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೇ ಇವೆ. 2023ರಲ್ಲಿ 600, 2024ರಲ್ಲಿ 739 ಹಾಗೂ 2025ರ ಜುಲೈವರೆಗೆ 549 ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. ಪೋಕ್ಸೋ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದ್ದು, 2023ರಲ್ಲಿ 3,902, 2024ರಲ್ಲಿ 4,064 ಹಾಗೂ 2025ರ ಜುಲೈವರೆಗೆ 2,544 ಪ್ರಕರಣಗಳು ದಾಖಲಾಗಿವೆ.
ಈ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ,“ಬಡತನ, ಅನಕ್ಷರತೆ, ಕಾನೂನಿನ ಕುರಿತು ಸಮರ್ಪಕ ಮಾಹಿತಿ ಇಲ್ಲದಿರುವುದರಿಂದ ಮಹಿಳೆಯರು ಹಾಗೂ ಮಕ್ಕಳ ಮೇಲೆ ದೌರ್ಜನ್ಯ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿವೆ. ಸಂತ್ರಸ್ತ ಮಹಿಳೆಯರಿಗೆ ಮಹಿಳಾ ಆಯೋಗ ಪೊಲೀಸ್ ಇಲಾಖೆಯ ಸಹಕಾರದ ಮೂಲಕ ರಕ್ಷಣೆ ಒದಗಿಸುವುದರ ಜೊತೆಗೆ ಅವರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುತ್ತಿದೆ’ ಎಂದು ತಿಳಿಸಿದ್ದಾರೆ.