ನವದೆಹಲಿ : ಮೆಕ್ಕಾದಿಂದ ಮದೀನಾಗೆ ಪ್ರಯಾಣಿಸುತ್ತಿದ್ದ ಪ್ರಯಾಣಿಕರ ಬಸ್‌ಗೆ ಡೀಸೆಲ್ ಟ್ಯಾಂಕರ್‌ಗೆ ಡಿಕ್ಕಿಯಾಗಿ 42 ಭಾರತೀಯ ಹಜ್ ಯಾತ್ರಿಕರು ಸಾವನ್ನಪ್ಪಿರುವುದಕ್ಕೆ ಪ್ರಧಾನಿ ಮೋದಿ ಸಂತಾಪ ಸೂಚಿಸಿದ್ದಾರೆ.
ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ಅವರು, ಮೆಕ್ಕಾದಿಂದ ಮದೀನಾಕ್ಕೆ ಹೊರಟಿದ್ದ ಭಾರತೀಯ ಯಾತ್ರಿಕರು ಸಾವನ್ನಪ್ಪಿರುವ ಸುದ್ದಿ ತಿಳಿದು, ಅತೀವ ನೋವಾಗಿದೆ. ಈ ಅವಘಡದಲ್ಲಿ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಸ್ಥರಿಗೆ ನೋವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ನೀಡಲಿ ಎಂದು ಆ ದೇವರಲ್ಲಿ ಪ್ರಾರ್ಥಿಸುತ್ತೇನೆ.
ಗಾಯಗೊಂಡವರೆಲ್ಲರೂ ಶೀಘ್ರವಾಗಿ ಚೇತರಿಸಿಕೊಳ್ಳಿ. ರಿಯಾದ್‌ನಲ್ಲಿರುವ ನಮ್ಮ ರಾಯಭಾರಿ ಕಚೇರಿ ಹಾಗೂ ಜೆಡ್ಡಾದ ರಾಯಭಾರಿ ಕಚೇರಿಯು ಎಲ್ಲಾ ರೀತಿಯ ಸಹಾಯ ಮಾಡಲಿದೆ. ನಮ್ಮ ಅಧಿಕಾರಿಗಳು ಸೌದಿ ಅರೇಬಿಯಾ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ ಎಂದು ತಿಳಿಸಿದ್ದಾರೆ.
ಏನಿದು ದುರಂತ?
ಸೌದಿ ಅರೇಬಿಯಾದ ಮೆಕ್ಕಾ ಬಳಿಯ ಅಲ್ ಮುಫ್ರಿಹಾತ್‌ನಲ್ಲಿ ಈ ಘಟನೆ ನಡೆದಿದೆ. ಸಾವನ್ನಪ್ಪಿದರ ಪೈಕಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು, ಮಕ್ಕಳಿದ್ದಾರೆ. ಮೃತಪಟ್ಟವರು ಹೈದರಾಬಾದ್ ಮೂಲದವರು ಎನ್ನಲಾಗಿದೆ. ಮೆಕ್ಕಾದಲ್ಲಿ ತಮ್ಮ ಉಮ್ರಾ ವಿಧಿಗಳನ್ನು ಪೂರ್ಣಗೊಳಿಸಿ ಮದೀನಾಕ್ಕೆ ತೆರಳುತ್ತಿದ್ದಾಗ ಪ್ರವಾಸಿಗರ ಬಸ್ಸಿಗೆ ಡಿಸೇಲ್ ಟ್ಯಾಂಕರ್ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಬೆಂಕಿ ಹೊತ್ತಿಕೊಂಡಿದೆ. ಸೋಮವಾರ ನಸುಕಿನ ಜಾವ 1:30ಕ್ಕೆ ಘಟನೆ ನಡೆದಾಗ ಪ್ರಯಾಣಿಕರು ನಿದ್ದೆಯಲ್ಲಿದ್ದರು. ಹೀಗಾಗಿ ಸಾವು ನೋವಿನ ಸಂಖ್ಯೆ ಹೆಚ್ಚಾಗಿದೆ. 46 ಯಾತ್ರಿಕರು ಹೈದ್ರಬಾದ್‌ನ ಎರಡು ಟ್ರಾವೆಲ್ ಏಜೆನ್ಸಿಗಳ ಮೂಲಕ ತೆರಳಿದ್ದರು. ಅಪಘಾತದಲ್ಲಿ ಓರ್ವ ಚಾಲಕ ಬದುಕುಳಿದಿದ್ದು, ತೀವ್ರ ಗಾಯಗೊಂಡಿದ್ದಾರೆ. ಸದ್ಯ ಭಾರತೀಯ ರಾಯಬಾರಿ ಕಚೇರಿಗೆ ಯಾತ್ರಿಕರ ಪಾಸ್‌ಪೋರ್ಟ್ ಹಾಗೂ ವಿಸಾಗಳನ್ನ ಟ್ರಾವೆಲ್ ಏಜೆನ್ಸಿ ಕಳುಹಿಸಿದೆ.
ಇದನ್ನೂ ಓದಿ : ತುಮಕೂರಿನಲ್ಲಿ ಗೋಧಿ ಲಾರಿ ಪಲ್ಟಿ | ರೋಡಿಗೆ ಬಿದ್ದ ಗೋಧಿ ಬಾಚಲು ಮುಗಿಬಿದ್ದ ಜನ!



















