ನವದೆಹಲಿ: ಇತ್ತೀಚೆಗೆ ದೇಶದಲ್ಲಿ ಕಳ್ಳತನ ಸೇರಿದಂತೆ ಕ್ರಿಮಿನಲ್ ಚಟುವಟಿಕೆಗಳು ಹೆಚ್ಚಾಗುತ್ತಿವೆ. ಸಾಮಾನ್ಯ ಜನರನ್ನು ಭಯಭೀತಗೊಳಿಸುವ ಘಟನೆಗಳು ಹೆಚ್ಚಾಗುತ್ತಿರುವುದಕ್ಕೆ ಸಹಜವಾಗಿ ಆತಂಕ ಹೆಚ್ಚಾಗುತ್ತಿದೆ. ದೆಹಲಿ ಮೆಟ್ರೋದಲ್ಲಿ ಕೂಡ ಈಗ ಕಳ್ಳರ ಹಾವಳಿ ಹೆಚ್ಚಾಗುತ್ತಿದ್ದು, ಸಾಮಾನ್ಯ ಪ್ರಯಾಣಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
2024 ಜನವರಿಯಿಂದ ಇಲ್ಲಿಯವರೆಗೆ ದೆಹಲಿ ಮೆಟ್ರೊದಲ್ಲಿ ಸುಮಾರು 3,952 ಕಳ್ಳತನ ಪ್ರಕರಣಗಳು ನಡೆದಿವೆ ಎಂದು ವರದಿಯಾಗಿವೆ. ಈ ಅಂಕಿ- ಸಂಖ್ಯೆ ಕಂಡು ಪ್ರಯಾಣಿಕರು ಕಂಗಾಲಾಗಿದ್ದಾರೆ.
2023ರ ಸೆಪ್ಟೆಂಬರ್ 8ರವರೆಗೆ ಸುಮಾರು 3,709 ಕಳ್ಳತನ ಪ್ರಕರಣಗಳು ವರದಿಯಾಗಿದ್ದವು. ಇದಕ್ಕೆ ಹೋಲಿಸಿದರೆ ಈ ವರ್ಷ ಕಳ್ಳತನ ಪ್ರಕರಣಗಳ ಸಂಖ್ಯೆಯಲ್ಲಿ ಭಾರೀ ಹೆಚ್ಚಳವಾಗಿದೆ. ಅಂದರೆ ಈ ವರ್ಷ ಕೇವಲ 8 ತಿಂಗಳಲ್ಲಿ ನಾಲ್ಕು ಸಾವಿರ ಗಡಿಯಷ್ಟು ಕಳ್ಳತನ ಪ್ರಕರಣಗಳು ದಾಖಲಾಗಿವೆ.
ಜೇಬು ಕಳ್ಳತನ, ಮೊಬೈಲ್ ಮತ್ತು ಬೆಲೆಬಾಳುವ ವಸ್ತಗಳ ಕಳ್ಳತನ ಪ್ರಕರಣಗಳು ಸೇರಿದಂತೆ ಇಷ್ಟೊಂದು ಪ್ರಕರಣಗಳು ದಾಖಲಾಗಿವೆ. ಒಟ್ಟು 3,952 ಪ್ರಕರಣಗಳಲ್ಲಿ ಕನಿಷ್ಠ 3,898 ಕಳ್ಳತನ ಪ್ರಕರಣಗಳು ಇ-ಎಫ್ ಐಆರ್ ಗಳ ಮೂಲಕ ದಾಖಲಾಗಿವೆ. ಅವುಗಳಲ್ಲಿ 548 ಪ್ರಕರಣಗಳನ್ನು ಈ ವರ್ಷ ಸೆಪ್ಟೆಂಬರ್ 8ರ ಒಳಗೆ ಪರಿಹರಿಸಲಾಗಿರುವಾದಿಗ ಪೊಲೀಸ್ ಮೂಲಗಳು ತಿಳಿಸಿವೆ.
ಮೆಟ್ರೋ ನಿಲ್ದಾಣಗಳಲ್ಲಿ ಸೆಪ್ಟೆಂಬರ್ 8 ರ ವರೆಗೆ ಕನಿಷ್ಠ 81 ಮೋಟಾರು ವಾಹನ ಕಳ್ಳತನ ಪ್ರಕರಣಗಳು, ಐದು ದರೋಡೆ ಪ್ರಕರಣಗಳು ದಾಖಲಾಗಿದ್ದವು. ಈ ಬಾರಿ ಇಲ್ಲಿಯವರೆಗೆ 72 ವಾಹನ ಕಳ್ಳತನ ಪ್ರಕರಣ ದಾಖಲಾಗಿವೆ.