ಮೈಸೂರು : ಜಿಲ್ಲೆಯ ಹುಣಸೂರು ತಾಲೂಕಿನ ಗೌಡನಕಟ್ಟೆ ಗ್ರಾಮದಲ್ಲಿ ನ.29 ರಂದು ತಾಯಿಯೊಂದಿಗೆ 4 ಹುಲಿ ಮರಿಗಳು ಸೆರೆ ಸಿಕ್ಕಿದ್ದವು. ಆಹಾರ ಸೇವಿಸದೆ ಅಸ್ವಸ್ಥಗೊಂಡಿದ್ದ ಹುಲಿಮರಿಗಳೀಗ ಮೃತಪಟ್ಟಿವೆಯೆಂದು ತಿಳಿದುಬಂದಿದೆ. ಮರಿಗಳ ಸಾವಿಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಪಶುವೈದ್ಯರು ಮೃತ ಹುಲಿ ಮರಿಗಳ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ.
ಗೌಡನಕಟ್ಟೆಯ ಪ್ರಕಾಶ್ ಜೋಳದ ಹೊಲದಲ್ಲಿ ನ.28ರಂದು ನಾಲ್ಕು ಮರಿಗಳೊಂದಿಗೆ ತಾಯಿ ಹುಲಿ ಕಾಣಿಸಿಕೊಂಡಿತ್ತು. ಮಧ್ಯರಾತ್ರಿ ತಾಯಿ ಹುಲಿ ಸೆರೆಯಾಗಿತ್ತು. ಎರಡು ದಿನಗಳ ನಂತರ ನ.30ರಂದು ನಾಲ್ಕು ಹುಲಿ ಮರಿಗಳು ಪತ್ತೆಯಾಗಿದ್ದವು. ಸೆರೆ ಹಿಡಿಯುವ ವೇಳೆ ಜನರ ಕಿರುಚಾಟದಿಂದ ಹುಲಿ ಮರಿಗಳು ಗಾಬರಿಯಾಗಿದ್ದವು. ಎರಡು ದಿನ ತಾಯಿಯಿಂದ ದೂರವಾಗಿದ್ದ ಮರಿಗಳು ಆಹಾರವಿಲ್ಲದೇ ಬಳಲಿದ್ದವು. ಜನರ ಕೂಗಾಟದಿಂದ ಅತ್ತಿಂದಿತ್ತ ಓಡಾಡಿ ಸೆರೆ ಹಿಡಿಯುವ ವೇಳೆ ನಿತ್ರಾಣಗೊಂಡಿದ್ದವು.
ನಂತರ ಅವುಗಳನ್ನು ಕೂಡ ಕೂರ್ಗಳ್ಳಿ ಪುನರ್ವಸತಿ ಕೇಂದ್ರಕ್ಕೆ ಕಳುಹಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಗಾಬರಿಯಿಂದ ಮತ್ತು ಆಹಾರ ಸೇವಿಸದೆ ಅಸ್ವಸ್ಥಗೊಂಡ ಕಾರಣ ಕಳೆದ ನಾಲ್ಕು ದಿನಗಳ ಒಳಗೆ ಒಂದಾದ ಮೇಲೆ ಒಂದು ಮರಿಗಳು ಪ್ರಾಣ ಕಳೆದುಕೊಂಡಿವೆ ಎಂದು ಹೇಳಲಾಗುತ್ತಿದೆ. ಪಶುವೈದ್ಯರು ನಾಲ್ಕೂ ಹುಲಿ ಮರಿಗಳ ಮರಣೋತ್ತರ ಪರೀಕ್ಷೆ ನಡೆಸುತ್ತಿದ್ದು, ಮರಿಗಳ ಸಾವಿಗೆ ನಿಖರ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ತಾಯಿ ಹುಲಿ ಮಾತ್ರ ಸಧ್ಯಕ್ಕೆ ಆರೋಗ್ಯವಾಗಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ : ಇಂದು ವಿಧಾನಸಭೆಯಲ್ಲಿ ದ್ವೇಷ ಭಾಷಣ ಪ್ರತಿಬಂಧಕ ವಿಧೇಯಕ ಮಂಡನೆ | ವಿಧೇಯಕದಲ್ಲೇನಿದೆ ಗೊತ್ತಾ?



















