ಬೆಂಗಳೂರು: ಕ್ರೆಡಿಟ್ ಕಾರ್ಡ್ ಗಳನ್ನು ತುಂಬ ಜನ ಪರ್ಸ್ ನಲ್ಲಿಯೇ ಇಟ್ಟುಕೊಂಡು ತಿರುಗಾಡುತ್ತಾರೆ. ವೈಫೈ ಪೇಮೆಂಟ್ ಸೌಲಭ್ಯ ಇದ್ದರೂ, ಪ್ರತಿದಿನ ಅದರ ಅಗತ್ಯ ಇರದಿದ್ದರೂ ಅದನ್ನು ಪರ್ಸ್ ನಲ್ಲೇ ಇಟ್ಟಿರುತ್ತಾರೆ. ಹೀಗೆ ಪರ್ಸ್ ನಲ್ಲಿ ಇಟ್ಟುಕೊಂಡ ಕ್ರೆಡಿಟ್ ಕಾರ್ಡ್ ಕಳೆದುಹೋದರೆ ಅಥವಾ ಯಾರಾದರೂ ನಮ್ಮ ಕ್ರೆಡಿಟ್ ಕಾರ್ಡ್ ಕಳ್ಳತನ ಮಾಡಿದರೆ ಖಂಡಿತವಾಗಿಯೂ ಗಾಬರಿಯಾಗುತ್ತದೆ. ಹಾಗೊಂದು ವೇಳೆ ನಮ್ಮ ಕ್ರೆಡಿಟ್ ಕಾರ್ಡ್ ಕಳೆದುಹೋದರೆ ಏನು ಮಾಡಬೇಕು? ಇಲ್ಲಿವೆ ನಾಲ್ಕು ಮಾರ್ಗಗಳು.
- ತಕ್ಷಣ ಕಸ್ಟಮರ್ ಕೇರ್ ಗೆ ಕರೆ ಮಾಡಿ
ಕ್ರೆಡಿಟ್ ಕಾರ್ಡ್ ಕಳೆದುಹೋದರೆ ಅಥವಾ ಕಳ್ಳತನವಾದರೆ, ಮೊದಲು ಬ್ಯಾಂಕಿನ ಕಸ್ಟಮರ್ ಕೇರ್ ಗೆ ಕರೆ ಮಾಡಬೇಕು. ಕಸ್ಟಮರ್ ಸೇವೆಯು ದಿನದ 24 ಗಂಟೆ ಲಭ್ಯವಿರುವ ಕಾರಣ ಕೂಡಲೇ ಕರೆ ಮಾಡಿ ಕಾರ್ಡ್ ಬ್ಲಾಕ್ ಮಾಡಿಸಬೇಕು. ಆ ಮೂಲಕ ಕಳೆದುಹೋದ ಕ್ರೆಡಿಟ್ ಕಾರ್ಡ್ ನಿಂದ ಯಾವುದೇ ವಹಿವಾಟು ಮಾಡದಂತೆ ತಡೆಯಬಹುದು. - ಇಂಟರ್ ನೆಟ್ ಬ್ಯಾಂಕಿಂಗ್ ಬಳಸಿ
ಕಸ್ಟಮರ್ ಕೇರ್ ಗೆ ಕರೆ ಹೋಗಲಿಲ್ಲ, ಅವರು ಸ್ವೀಕರಿಸಲಿಲ್ಲ ಎಂದರೆ ಇಂಟರ್ ನೆಟ್ ಬ್ಯಾಂಕಿಂಗ್ ಮೂಲಕವೂ ಕಾರ್ಡ್ ಬ್ಲಾಕ್ ಮಾಡಬಹುದು. ಬ್ಯಾಂಕ್ ನ ಮೊಬೈಲ್ ಆ್ಯಪ್ ಅಥವಾ ಇಂಟರ್ ನೆಟ್ ಬ್ಯಾಂಕಿಂಗ್ ವೆಬ್ ಸೈಟ್ ಗೆ ಲಾಗಿನ್ ಆಗಿ. ಅಲ್ಲಿ ‘Block Card’ ಅಥವಾ ‘Lock Card’ ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡುವ ಮೂಲಕ ಬ್ಲಾಕ್ ಮಾಡಬಹುದು. - ಕೂಡಲೇ ದೂರು ದಾಖಲಿಸಿ
ಕ್ರೆಡಿಟ್ ಕಳ್ಳತನವಾಗಿದೆ, ಹೆಚ್ಚಿನ ಹಣದ ವಂಚನೆಯಾಗಿದೆ ಎಂದ ಕೂಡಲೇ ಹತ್ತಿರದ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಬೇಕು. ಅಷ್ಟೇ ಅಲ್ಲ, ನೀವು ಆನ್ಲೈನ್ನಲ್ಲೇ ರಾಷ್ಟ್ರೀಯ ಸೈಬರ್ ಅಪರಾಧ ವರದಿ ಪೋರ್ಟಲ್ https://cybercrime.gov.in/ ಗೆ ಭೇಟಿ ನೀಡಿ ದೂರು ಸಲ್ಲಿಸಬಹುದು. ಎಫ್ಐಆರ್ ದಾಖಲಿಸುವುದು ಮುಂದಿನ ಕಾನೂನು ಪ್ರಕ್ರಿಯೆಗಳಿಗೆ ಪ್ರಮುಖ ಸಾಕ್ಷಿಯಾಗಿರುತ್ತದೆ ಎಂಬುದು ನೆನಪಿರಲಿ. - ಬಿಲ್ ಗಳ ಪಟ್ಟಿ ಇರಲಿ
ಕ್ರೆಡಿಟ್ ಕಾರ್ಡ್ ಕಳೆದು, ಅದನ್ನು ಬ್ಲಾಕ್ ಮಾಡಿಸಿ, ಹೊಸ ಕ್ರೆಡಿಟ್ ಕಾರ್ಡ್ ಪಡೆಯಲು ಸ್ವಲ್ಪ ಸಮಯ ಬೇಕಾಗುತ್ತದೆ. ಇಂತಹ ಸಂದರ್ಭಗಳಲ್ಲಿ ನಿಮ್ಮ ಕ್ರೆಡಿಟ್ ಕಾರ್ಡ್ ಬಿಲ್, ಕ್ರೆಡಿಟ್ ಕಾರ್ಡ್ ಮೂಲಕ ಮಾಡುವ ಪೇಮೆಂಟ್ ಗಳ ಪಟ್ಟಿ ತಯಾರಿಸಿ. ಇದರಿಂದ ವಿಳಂಬ ಪಾವತಿ ಮೇಲಿನ ದಂಡದಿಂದ ಪಾರಾಗಬಹುದಾಗಿದೆ.



















