ಬೆಂಗಳೂರು: ಪ್ರಯಾಗ್ ರಾಜ್ ಮಹಾಕುಂಭದಲ್ಲಿ 65 ಕೋಟಿಗೂ ಅಧಿಕ ಜನರು ಪವಿತ್ರ ಸ್ನಾನ ಮಾಡಿದ್ದಾರೆ. ರಾಜ್ಯದಿಂದಲೂ ಲಕ್ಷಾಂತರ ಜನರು ಪ್ರಯಾಗ್ ರಾಜ್ ಗೆ ತೆರಳಿ ಪವಿತ್ರ ನದಿಯಲ್ಲಿ ಮಿಂದೆದ್ದು ಪುನೀತರಾಗಿದ್ದಾರೆ. ರಾಜ್ಯದ ಓರ್ವ ವ್ಯಕ್ತಿ ತ್ರಿವೇಣಿ ಸಂಗಮದಲ್ಲಿ ಮುಳುಗಿ ಎದ್ದಾಗ 4 ಲಕ್ಷ ರೂ. ಮೌಲ್ಯದ ಚಿನ್ನದ ಸರ ನಾಪತ್ತೆಯಾಗಿದೆ ಎನ್ನಲಾಗಿದೆ.
ಸುದರ್ಶನ್ ಎಂಬುವವರು ಅಂದಾಜು ನಾಲ್ಕು ಲಕ್ಷ ರೂ. ಮೌಲ್ಯದ ಚಿನ್ನದ ಸರ ಕಳೆದುಕೊಂಡಿದ್ದಾರೆ. ಸುದರ್ಶನ್ ಕುಟುಂಬ ಸಮೇತರಾಗಿ ಪ್ರಯಾಗ್ ರಾಜ್ ಗೆ ತೆರಳಿದ್ದರು. ಕುಟುಂಬಸ್ಥರೆಲ್ಲ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡುತ್ತಿದ್ದರು. ಈ ವೇಳೆ ಸುದರ್ಶನ್ ನೀರಿನಲ್ಲಿ ಮುಳುಗಿದ ತಕ್ಷಣ, ಅವರು ಧರಿಸಿದ್ದ 4 ಲಕ್ಷ ರೂ. ಮೌಲ್ಯದ ಚಿನ್ನದ ಸರ ಕಳೆದುಕೊಂಡಿದ್ದಾರೆ.
ಸುದರ್ಶನ್ ನಾಲ್ಕು ತೊಲಗಳಿಗಿಂತ ಹೆಚ್ಚು ತೂಕದ ಚಿನ್ನದ ಸರ ಧರಿಸಿದ್ದರು. ಇವರ ಅಕ್ಕಪಕ್ಕ ಸ್ನಾನ ಮಾಡುತ್ತಿದ್ದವರು ಈ ಸರ ಎಗರಿಸಿದ್ದಾರೆ ಎಂಬ ಆರೋಪ ಸುದರ್ಶನ್ ಕುಟುಂಬಸ್ಥರದ್ದಾಗಿದ್ದು, ಈ ಕುರಿತು ಪೊಲೀಸರಗೆ ದೂರು ನೀಡಲು ಹೋದರೂ ಅವರು ದೂರು ದಾಖಲಿಸಿಕೊಂಡಿಲ್ಲ ಎಂಬ ಆರೋಪ ಕೇಳಿ ಬಂದಿದೆ.
ಮಹಾ ಕುಂಭಮೇಳದಲ್ಲಿ 45 ಕೋಟಿ ಭಕ್ತರು ಭಾಗಿಯಾಗುವ ನಿರೀಕ್ಷೆ ಇತ್ತು. ಆದರೆ, 65 ಕೋಟಿಗೂ ಅಧಿಕ ಜನ ಮಹಾಕುಂಭ ಮೇಳದಲ್ಲಿ ಭಾಗವಹಿಸಿದ್ದಾರೆ. ದೇಶ- ವಿದೇಶಗಳಿಂದಲೂ ಜನರು ಭಾಗವಹಿಸಿದ್ದು, ವಿಶೇಷವಾಗಿತ್ತು.