ಬೆಂಗಳೂರು: ಕೇಂದ್ರ ಸರ್ಕಾರದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ, ಐಐಎಸ್‌ಸಿ ಬೆಂಗಳೂರು ಮತ್ತು ವಿವಿಧ ಐಐಟಿಗಳ ಸಹಯೋಗದೊಂದಿಗೆ ಭಾರತದ ಮೊದಲ ನ್ಯಾನೋ ಎಲೆಕ್ಟ್ರಾನಿಕ್ಸ್ ರೋಡ್‌ಶೋ ಬೆಂಗಳೂರಿನಲ್ಲಿ ಗುರುವಾರ (ಮಾರ್ಚ್27ರಂದು) ನಡೆಯಿತು. ಐಐಎಸ್‌ಸಿಯ ರಾಷ್ಟ್ರೀಯ ವಿಜ್ಞಾನ ಸೆಮಿನಾರ್ ಕಾಂಪ್ಲೆಕ್ಸ್‌ನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ 700ಕ್ಕೂ ಹೆಚ್ಚು ಉದ್ಯಮ ನಾಯಕರು, ನೀತಿ ನಿರೂಪಕರು ಮತ್ತು ಶಿಕ್ಷಣ ತಜ್ಞರು ಪಾಲ್ಗೊಂಡಿದ್ದರು.
ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯದ ಕಾರ್ಯದರ್ಶಿ ಶ್ರೀ ಎಸ್. ಕೃಷ್ಣನ್. ಹೆಚ್ಚುವರಿ ಕಾರ್ಯದರ್ಶಿ ಶ್ರೀ ಅಭಿಷೇಕ್ ಸಿಂಗ್, ಟಾಟಾ ಎಲೆಕ್ಟ್ರಾನಿಕ್ಸ್‌ನ ಉತ್ಪಲ್ ಶಾ, ಮೈಕ್ರಾನ್, ಐಐಎಸ್‌ಸಿ ಬೆಂಗಳೂರು ಮತ್ತು ಹಲವಾರು ಐಐಟಿಗಳ ಪ್ರಮುಖರು ಕಾರ್ಯಕ್ರಮವನ್ನು ಉದ್ಘಾಟಿಸಿದರು. 100ಕ್ಕೂ ಹೆಚ್ಚು ಬೌದ್ಧಿಕ ಆಸ್ತಿಗಳ (ಐಪಿ) ಪ್ರದರ್ಶನ, 50ಕ್ಕೂ ಅಧಿಕ ನವೀನ ತಂತ್ರಜ್ಞಾನಗಳ ಪರಿಚಯ ಮತ್ತು 35 ಭರವಸೆಯ ಸ್ಟಾರ್ಟ್‌ಅಪ್‌ಗಳ ಉದ್ಯಮಶೀಲತೆಯನ್ನು ಪ್ರದರ್ಶಿಸಲಾಯಿತು.
ಶ್ರೀ ಎಸ್. ಕೃಷ್ಣನ್ ಅವರು ಮಾತನಾಡಿ, ನ್ಯಾನೋ ಕೇಂದ್ರಗಳು 85,000 ಸೆಮಿಕಂಡಕ್ಟರ್-ಪರಿಣತ ಕಾರ್ಯಪಡೆಯನ್ನು ಸಿದ್ಧಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವುದನ್ನು ಒತ್ತಿ ಹೇಳಿದರು. ಅಲ್ಲದೆ, ಈ ಕಾರ್ಯಕ್ರಮವು ಭಾರತ ಸೆಮಿಕಂಡಕ್ಟರ್ ಮಿಷನ್‌ನ ದೃಷ್ಟಿಕೋನವನ್ನು ಸಾಕಾರಗೊಳಿಸುವಲ್ಲಿ ಭಾರತ ಸರ್ಕಾರದ ಪ್ರಮುಖ ಹೆಜ್ಜೆ ಎಂದರು.
ಮುಂದುವರಿದ ಅವರು, ” ನಾವು ಡಿಸೈನ್-ಲಿಂಕ್ಡ್ ಇನ್ಸೆಂಟಿವ್ ಯೋಜನೆ ಮೂಲಕ ಜಾಗತಿಕ ಪ್ರತಿಭೆಗಳನ್ನು ಆಕರ್ಷಿಸುತ್ತಿದ್ದೇವೆ. ಸೆಮಿಕಂಡಕ್ಟರ್ ಡಿಸೈನ್ ಮತ್ತು ಫ್ಯಾಬ್ರಿಕೇಶನ್ ಅನ್ನು ವರ್ಧಿಸಲು ವೆಂಚರ್ ಕ್ಯಾಪಿಟಲಿಸ್ಟ್‌ಗಳೊಂದಿಗೆ ಸಹಭಾಗಿತ್ವ ಹೊಂದಿದ್ದೇವೆ. 2030ರ ವೇಳೆಗೆ ನಮ್ಮ ಸೆಮಿಕಂಡಕ್ಟರ್ ಬೇಡಿಕೆ 100-110 ಬಿಲಿಯನ್ ಡಾಲರ್ ತಲುಪಲಿದೆ. ಇದು ದೇಶೀಯ ಬೇಡಿಕೆಗಳನ್ನು ಪೂರೈಸುವುದರ ಜೊತೆಗೆ ಭಾರತವನ್ನು ಜಾಗತಿಕ ರಫ್ತು ಕ್ಷೇತ್ರದಲ್ಲಿ ಪ್ರಮುಖ ದೇಶವನ್ನಾಗಿ ಮಾಡಲಿದೆ” ಎಂದರು.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ‘ಆತ್ಮನಿರ್ಭರ ಭಾರತ’ ಉಪಕ್ರಮದ ಮೇಲೆ ಕೇಂದ್ರಿತವಾಗಿದ್ದ ಈ ಸಮ್ಮೇಳನದಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಸೆಮಿಕಂಡಕ್ಟರ್ ಕ್ಷೇತ್ರಗಳಲ್ಲಿ ಭಾರತದ ದೃಢ ಸ್ಥಾನವನ್ನು ಒತ್ತಿಹೇಳಲಾಯಿತು. ಈ ಕಾರ್ಯಕ್ರಮವು ಕೇವಲ ಪ್ರದರ್ಶನವಷ್ಟೇ ಅಲ್ಲದೆ, ಭಾರತದ ನ್ಯಾನೋ ಎಲೆಕ್ಟ್ರಾನಿಕ್ಸ್ ಪರಿಸರವನ್ನು ಬಲಪಡಿಸಲು ಸಹಯೋಗದ ತಂತ್ರಗಳನ್ನು ಚರ್ಚಿಸುವ ಸ್ಥಳವಾಗಿಯೂ ಮಾರ್ಪಟ್ಟಿತ್ತು.
ಶ್ರೀ ಅಭಿಷೇಕ್ ಸಿಂಗ್ ಮಾತನಾಡಿ, ಎಲೆಕ್ಟ್ರಾನಿಕ್ಸ್‌ನ ಸಣ್ಣ ಆದರೆ ಶಕ್ತಿಶಾಲಿ ಸ್ವರೂಪವು ಸೂಪರ್‌ಕಂಪ್ಯೂಟಿಂಗ್, ಕ್ವಾಂಟಮ್ ಕಂಪ್ಯೂಟಿಂಗ್ ಮತ್ತು ಕೃತಕ ಬುದ್ಧಿಮತ್ತೆಯಲ್ಲಿ ಪ್ರಗತಿಗೆ ದಾರಿ ಮಾಡಿಕೊಟ್ಟಿದೆ ಎಂದರು. ಉದ್ಯಮ-ಶಿಕ್ಷಣ ಸಹಭಾಗಿತ್ವವು ಭಾರತವನ್ನು ಅತ್ಯಾಧುನಿಕ ತಂತ್ರಜ್ಞಾನದ ಮುಂಚೂಣಿಗೆ ತರಲಿದೆ ಎಂದು ಶ್ಲಾಘಿಸಿದರು.
ಹಲವಾರು ಒಡಂಬಡಿಕೆಗಳು
ಈ ಕಾರ್ಯಕ್ರಮವು ಸ್ಟಾರ್ಟ್‌ಅಪ್ ಪರಿಸರ ಮತ್ತು ಶಿಕ್ಷಣ ಸಂಸ್ಥೆಗಳ ನಡುವಿನ ಸಹಯೋಗಕ್ಕೆ ವೇದಿಕೆಯಾಯಿತು. ಈ ಸಂದರ್ಭದಲ್ಲಿ ಮಾಡಲಾದ ಹಲವಾರು ಒಡಂಬಡಿಕೆಗಳು (ಎಂಒಯು) ಭವಿಷ್ಯದ ಸಹಭಾಗಿತ್ವ ಮತ್ತು ತಾಂತ್ರಿಕ ಪ್ರಗತಿಗೆ ಮಾರ್ಗವಾಗಲಿದೆ.
ನ್ಯಾನೋ ಎಲೆಕ್ಟ್ರಾನಿಕ್ಸ್ ರೋಡ್‌ಶೋ ಭಾರತದ ಚಿಪ್ ಡಿಸೈನ್ ಮತ್ತು ನ್ಯಾನೋ ಎಲೆಕ್ಟ್ರಾನಿಕ್ಸ್‌ನಲ್ಲಿನ ಪ್ರಗತಿಯನ್ನು ಅನಾವರಣಗೊಳಿಸಿದೆ. ಈ ಕ್ಷೇತ್ರವನ್ನು ಮರುರೂಪಿಸುತ್ತಿರುವ ಆವಿಷ್ಕಾರವಾಗಿದೆ. ಸರ್ಕಾರಿ ಸಂಸ್ಥೆಗಳು, ಉದ್ಯಮದಗಳಿ ಮತ್ತು ಶಿಕ್ಷಣ ಸಂಸ್ಥೆಗಳ ಒಗ್ಗಟ್ಟು ಈ ವೇದಿಕೆಯಲ್ಲಿ ಪ್ರದರ್ಶನಗೊಂಡವು.