ವಾಷಿಂಗ್ಟನ್ : ನಾನು ನನ್ನ ಎರಡನೇ ಅವಧಿಯಲ್ಲಿ ಒಟ್ಟು 8 ಯುದ್ಧಗಳನ್ನು ನಿಲ್ಲಿಸಿದ್ದೇನೆ ಎಂದು ಪುನರುಚ್ಚರಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ವಿಶೇಷವಾಗಿ ಕಳೆದ ವರ್ಷ ಭಾರತ ಮತ್ತು ಪಾಕಿಸ್ತಾನದ ನಡುವೆ ಉಂಟಾಗಿದ್ದ ಉದ್ವಿಗ್ನತೆಯನ್ನು ಶಮನಗೊಳಿಸುವಲ್ಲಿ ತಮ್ಮ ಪಾತ್ರ ಬಹಳ ದೊಡ್ಡದಿದೆ ಎಂದು ಮತ್ತದೇ ರಾಗ ಹಾಡಿದ್ದಾರೆ.
ಒಂದು ವೇಳೆ ಅಮೆರಿಕ ಮಧ್ಯಪ್ರವೇಶ ಮಾಡದಿದ್ದರೆ, ಉಭಯ ದೇಶಗಳ ನಡುವಿನ ಪರಮಾಣು ಯುದ್ಧದಲ್ಲಿ ಸುಮಾರು 3.5 ಕೋಟಿ (35 ಮಿಲಿಯನ್) ಜನರು ಪ್ರಾಣ ಕಳೆದುಕೊಳ್ಳುತ್ತಿದ್ದರು ಎಂದು ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಅವರೇ ತಮಗೆ ತಿಳಿಸಿದ್ದರು ಎಂದು ಟ್ರಂಪ್ ಹೇಳಿಕೊಂಡಿದ್ದಾರೆ.
ಅಮೆರಿಕದ ಕಾಂಗ್ರೆಸ್ ಅನ್ನು ಉದ್ದೇಶಿಸಿ ಇಂದು ಮಾತನಾಡಿದ ಅಧ್ಯಕ್ಷ ಟ್ರಂಪ್, “ನಮ್ಮ ಆಡಳಿತವು ಅಮೆರಿಕನ್ನರ ಸುರಕ್ಷತೆಯನ್ನು ದೇಶದ ಒಳಗೆ ಮತ್ತು ಹೊರಗೆ ಮರುಸ್ಥಾಪಿಸುತ್ತಿದೆ. ನನ್ನ ಅಧಿಕಾರಾವಧಿಯ ಮೊದಲ ಹತ್ತು ತಿಂಗಳಲ್ಲಿ ನಾನು ಎಂಟು ಯುದ್ಧಗಳನ್ನು ಕೊನೆಗೊಳಿಸಿದ್ದೇನೆ. ಭಾರತ ಮತ್ತು ಪಾಕಿಸ್ತಾನದ ನಡುವೆ ಸಂಭವಿಸಬಹುದಾಗಿದ್ದ ಪರಮಾಣು ಯುದ್ಧವನ್ನು ತಪ್ಪಿಸಿದ್ದೇವೆ. ನನ್ನ ಮಧ್ಯಸ್ಥಿಕೆ ಇಲ್ಲದಿದ್ದರೆ 3.5 ಕೋಟಿ ಜನರು ಸಾವನ್ನಪ್ಪುತ್ತಿದ್ದರು ಎಂದು ಪಾಕಿಸ್ತಾನದ ಪ್ರಧಾನಿಯೇ ನನಗೆ ಹೇಳಿದ್ದಾರೆ,” ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲದೆ, ರಷ್ಯಾ-ಉಕ್ರೇನ್ ನಡುವಿನ ಯುದ್ಧವನ್ನು ಕೊನೆಗೊಳಿಸಲು ನಮ್ಮ ಸರ್ಕಾರ ಶ್ರಮಿಸುತ್ತಿದೆ ಎಂದೂ ತಿಳಿಸಿದ್ದಾರೆ.
ಸುಂಕದ ಎಚ್ಚರಿಕೆ ಬಗ್ಗೆಯೂ ಉಲ್ಲೇಖ
ಕಳೆದ ವರ್ಷ ಮೇ ತಿಂಗಳಲ್ಲಿ ಭಾರತ ಮತ್ತು ಪಾಕಿಸ್ತಾನ ಕದನ ವಿರಾಮಕ್ಕೆ ಒಪ್ಪಿಕೊಳ್ಳುವ ಮುನ್ನ ಎರಡೂ ದೇಶಗಳಿಗೆ ನಾನು ಸುಂಕದ ಬೆದರಿಕೆ ಹಾಕಿದ್ದೆ. ಶೇ.200ರಷ್ಟು ಸುಂಕ ಹೇರುವುದಾಗಿ ಹೇಳಿದ್ದೆ ಎಂದೂ ಅವರು ಸ್ಮರಿಸಿದ್ದಾರೆ. 2025ರ ಮೇ ತಿಂಗಳಿನಿಂದ ಈವರೆಗೆ ಟ್ರಂಪ್ ಅವರು ಸುಮಾರು 80 ಬಾರಿ ಈ ವಿಷಯವನ್ನು ಪ್ರಸ್ತಾಪಿಸಿದ್ದು, ದಕ್ಷಿಣ ಏಷ್ಯಾದಲ್ಲಿ ಸಂಭವಿಸಬಹುದಾಗಿದ್ದ ದೊಡ್ಡ ಮಟ್ಟದ ರಕ್ತಪಾತವನ್ನು ತಡೆದ ಕೀರ್ತಿ ತಮಗೆ ಸಲ್ಲಬೇಕು ಎಂದು ಪ್ರತಿಪಾದಿಸುತ್ತಾ ಬಂದಿದ್ದಾರೆ.
2025ರ ಏಪ್ರಿಲ್ 22 ರಂದು ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ನಾಗರಿಕರು ಬಲಿಯಾಗಿದ್ದರು. ಇದಕ್ಕೆ ಪ್ರತಿಕಾರವಾಗಿ ಭಾರತವು ಮೇ 7 ರಂದು ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಭಯೋತ್ಪಾದಕ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡು ‘ಆಪರೇಷನ್ ಸಿಂದೂರ’ ಹೆಸರಲ್ಲಿ ಸೇನಾ ಕಾರ್ಯಾಚರಣೆಯನ್ನು ನಡೆಸಿತ್ತು. ಇದು ಉಭಯ ದೇಶಗಳ ನಡುವೆ ಪೂರ್ಣ ಪ್ರಮಾಣದ ಯುದ್ಧದ ಭೀತಿಯನ್ನು ಹುಟ್ಟುಹಾಕಿತ್ತು. ಟ್ರಂಪ್ ಅವರು ತಮ್ಮ ಮಧ್ಯಸ್ಥಿಕೆಯ ಬಗ್ಗೆ ಪದೇ ಪದೇ ಹೇಳಿಕೆ ನೀಡುತ್ತಿದ್ದರೂ, ಭಾರತ ಇದನ್ನು ಸಾರಾಸಗಟಾಗಿ ತಿರಸ್ಕರಿಸುತ್ತಾ ಬಂದಿದೆ. ಯಾವುದೇ ಮೂರನೇ ದೇಶದ ಹಸ್ತಕ್ಷೇಪವಿಲ್ಲದೆ, ಎರಡೂ ದೇಶಗಳ ಮಿಲಿಟರಿ ಕಾರ್ಯಾಚರಣೆಯ ಮಹಾನಿರ್ದೇಶಕರ (DGMOs) ನಡುವಿನ ನೇರ ಮಾತುಕತೆಯ ಫಲವಾಗಿ ಕದನ ವಿರಾಮ ಏರ್ಪಟ್ಟಿದೆ ಎಂದು ಸ್ಪಷ್ಟಪಡಿಸಿದೆ.
ಇದನ್ನೂ ಓದಿ : ಪಾಕ್ ವಿರುದ್ಧ ಇಂಗ್ಲೆಂಡ್‌ಗೆ ಭರ್ಜರಿ ಜಯ | ಹ್ಯಾರಿ ಬ್ರೂಕ್ ಐತಿಹಾಸಿಕ ಶತಕದೊಂದಿಗೆ ಸೆಮೀಸ್‌ಗೆ ಲಗ್ಗೆ!



















