ಬೆಂಗಳೂರು: ಬೆಂಗಳೂರಿನಲ್ಲಿರುವ ಮೆಟ್ರೊ ರೈಲು ನಿಗಮ ನಿಯಮಿತದಲ್ಲಿ (BMRCL) ಉದ್ಯೋಗ ಗಿಟ್ಟಿಸಿಕೊಳ್ಳಲು ಸುವರ್ಣಾವಕಾಶ ದೊರೆತಿದೆ. ಬಿಎಂಆರ್ ಸಿಎಲ್ ನ ಸಿವಿಲ್ ಎಂಜಿನಿಯರಿಂಗ್ ಸೆಕ್ಷನ್ ನ ಪ್ರಾಜೆಕ್ಟ್ ವಿಭಾಗದಲ್ಲಿ ಗ್ರ್ಯಾಜುಯೇಟ್ ಎಂಜಿನಿಯರ್ ಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಲಾಗಿದೆ. ಆನ್ ಲೈನ್ ಹಾಗೂ ಆಫ್ ಲೈನ್ ಮೂಲಕ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
ಒಟ್ಟು 35 ಹುದ್ದೆಗಳು ಖಾಲಿ ಇವೆ. ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಮೇ 3 ಕೊನೆಯ ದಿನವಾಗಿದೆ. ಆನ್ ಲೈನ್ ಮೂಲಕ http://bmrc.co.in/career/ ವೆಬ್ ಸೈಟ್ ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಇನ್ನು, ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಮೇ 7ರ ಸಂಜೆ 4 ಗಂಟೆಯ ಗಡುವು ನೀಡಲಾಗಿದೆ. ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸುವವರು ಜನರಲ್ ಮ್ಯಾನೇಜರ್ (ಎಚ್ ಆರ್), ಬೆಂಗಳೂರು ಮೆಟ್ರೋ ರೈಲ್ ಕಾರ್ಪೋರೇಷನ್ ಲಿಮಿಟೆಡ್, 3ನೇ ಮಹಡಿ, ಬಿಎಂಟಿಸಿ ಕಾಂಪ್ಲೆಕ್ಸ್, ಕೆ ಎಚ್ ರಸ್ತೆ, ಶಾಂತಿನಗರ, ಬೆಂಗಳೂರು – 560027 ವಿಳಾಸಕ್ಕೆ ಕಳುಹಿಸಬಹುದಾಗಿದೆ.
ಆಯ್ಕೆಯಾದವರಿಗೆ ಮಾಸಿಕ 44 ಸಾವಿರ ರೂ. ಸಂಬಳ ನೀಡಲಾಗುತ್ತದೆ. ಬಿಎಂಆರ್ ಸಿಎಲ್ ಒ ಆಐಡ್ ಎಂ ವಲಯದ ನಿಯಮಗಳ ಪ್ರಕಾರ ಭತ್ಯೆಗಳನ್ನು ನೀಡಲಾಗುತ್ತದೆ. ಗ್ರ್ಯಾಜುಯೇಟ್ ಎಂಜಿನಿಯರ್ ಗಳನ್ನು ಗುತ್ತಿಗೆ ಆಧಾರದ ಮೇಲೆ ಮೂರು ವರ್ಷಗಳ ಅವಧಿಗೆ ನೇಮಕ ಮಾಡಿಕೊಳ್ಳಲಾಗುತ್ತದೆ. ಅವರ ಕಾರ್ಯಕ್ಷಮತೆಯ ಆಧಾರದ ಮೇಲೆ ಅವಧಿಯನ್ನು ವಿಸ್ತರಣೆ ಮಾಡಲಾಗುತ್ತದೆ.
ವಿದ್ಯಾರ್ಹತೆ ಏನು?
ಸಿವಿಲ್ ಎಂಜಿನಿಯರಿಂಗ್ ಬ್ರ್ಯಾಂಚ್ ನಲ್ಲಿ ಬಿಇ ಅಥವಾ ಬಿ.ಟೆಕ್ ಕೋರ್ಸ್ ಮುಗಿಸಿರಬೇಕು. ಕನಿಷ್ಠ ಶೇ.60ರಷ್ಟು ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು. ಅಧಿಸೂಚನೆ ದಿನಾಂಕಕ್ಕೆ ವ್ಯಾಲಿಡ್ ಆಗಿರುವ ಗೇಟ್ ಸ್ಕೋರ್ ಇರಬೇಕು. ಕನ್ನಡ ಓದಲು, ಬರೆಯಲು, ಮಾತನಾಡಲು ತಿಳಿದಿರಬೇಕು. ಅರ್ಜಿ ಸಲ್ಲಿಸಿದವರನ್ನು ಗೇಟ್ ಸ್ಕೋರ್ ಆಧಾರದಲ್ಲಿ ಆಯ್ಕೆ ಮಾಡಲಾಗುತ್ತದೆ. ನಂತರ ಅವರನ್ನು ದಾಖಲೆಗಳ ಪರಿಶೀಲನೆ ಮತ್ತು ಸಂದರ್ಶನಕ್ಕೆ ಕರೆದು ಅಂತಿಮವಾಗಿ ನೇಮಕಾತಿ ಆದೇಶ ನೀಡಲಾಗುತ್ತದೆ.