ಕೇಂದ್ರ ಸರಕಾರದ ನೌಕರಿ ಪಡೆಯಬೇಕು ಎಂಬುದು ಕೋಟ್ಯಂತರ ಜನರ ಕನಸಾಗಿರುತ್ತೆ. ಉದ್ಯೋಗ ಭದ್ರತೆ, ವೇತನ ಶ್ರೇಣಿ ಸೇರಿ ಹತ್ತಾರು ಸೌಕರ್ಯ ಇರುವುದರಿಂದ ಅಭ್ಯರ್ಥಿಗಳು ಕೇಂದ್ರ ಸರ್ಕಾರದ ಹುದ್ದೆಯ ಕನಸು ಹೊಂದಿರುತ್ತಾರೆ. ಈಗ ಆ ಕನಸು ನನಸು ಮಾಡಿಕೊಳ್ಳುವ ಸಮಯ ಬಂದಿದೆ. ಹೌದು, ರೈಲ್ವೆ ಇಲಾಖೆಯಲ್ಲಿ ಭರ್ಜರಿ 32 ಸಾವಿರ ಹುದ್ದೆಗಳ ನೇಮಕಾತಿಗಾಗಿ ಇಲಾಖೆಯು ಶಾರ್ಟ್ ನೋಟಿಫಿಕೇಷನ್ ಹೊರಡಿಸಿದೆ. ಆದಾಗ್ಯೂ, ಜನವರಿಯಲ್ಲಿ ಅರ್ಜಿ ಸಲ್ಲಿಕೆ ಆರಂಭವಾಗಲಿದೆ ಎಂದು ತಿಳಿದುಬಂದಿದೆ.
2024ರಲ್ಲಿ ಸಾಲು ಸಾಲಾಗಿ ರೈಲ್ವೆ ಇಲಾಖೆಯು ನೇಮಕಾತಿ ಮಾಡಿಕೊಂಡಿದೆ. ಈಗ ಡಿ ಗ್ರೂಪ್ ಹುದ್ದೆಗಳನ್ನು ಭರ್ತಿ ಮಾಡಲು ಶಾರ್ಟ್ ನೋಟಿಫಿಕೇಶನ್ ಹೊರಡಿಸಿದೆ. ಇದೇ ತಿಂಗಳಲ್ಲಿ ವಿಸ್ತೃತ ಮಾಹಿತಿ ಹಂಚಿಕೊಳ್ಳುವ ಜತೆಗೆ ಅರ್ಜಿಗಳನ್ನೂ ಸ್ವೀಕಾರ ಮಾಡಲಿದೆ ಎಂದು ತಿಳಿದುಬಂದಿದೆ. ನೇರ ನೇಮಕಾತಿ ಪ್ರಕ್ರಿಯೆ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಿದ್ದು, ಕನಿಷ್ಠ ಎಸ್ ಎಸ್ ಎಲ್ ಸಿ ಪಾಸಾದವರೂ ಇಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.
ಟ್ರ್ಯಾಕ್ ಮೇಂಟೆನರ್ ಗ್ರೇಡ್ 4, ತಾಂತ್ರಿಕ ವಿಭಾಗದ ಸಹಾಯಕ, ಅಸಿಸ್ಟಂಟ್ ಪಾಯಿಂಟ್ಸ್ಮನ್, ಟ್ರ್ಯಾಕ್ ಮನ್, ಅಸಿಸ್ಟಂಟ್ ಬ್ರಿಡ್ಜ್ ಸೇರಿ ಹಲವು ಪೋಸ್ಟ್ ಗಳನ್ನು ಭರ್ತಿ ಮಾಡಲಾಗುತ್ತದೆ. ಏಳನೇ ವೇತನ ಆಯೋಗದ ಶಿಫಾರಸುಗಳ ಅನ್ವಯ ನೌಕರರ ಆರಂಭಿಕ ವೇತನ 18 ಸಾವಿರ ರೂಪಾಯಿ ಇರುತ್ತದೆ. ಕನಿಷ್ಠ 18 ವರ್ಷ ತುಂಬಿದವರು ಅರ್ಜಿ ಸಲ್ಲಿಸಬಹುದಾಗಿದ್ದು, ಗರಿಷ್ಠ ವರ್ಷ ಮಿತಿ 36 ವರ್ಷ ಆಗಿದೆ.
ಎಲ್ಲ ಕೆಟಗರಿಯ ಅಭ್ಯರ್ಥಿಗಳಿಗೆ ರೈಲ್ವೆ ಇಲಾಖೆಯು ಸಿಹಿ ಸುದ್ದಿ ನೀಡಿದೆ. 2020ರ ಕೋವಿಡ್ ಬಿಕ್ಕಟ್ಟು ಹಿನ್ನೆಲೆಯಲ್ಲಿ ಎಲ್ಲ ಕೆಟಗರಿಗಳ ಅಭ್ಯರ್ಥಿಗಳಿಗೆ 3 ವರ್ಷ ವಯಸ್ಸಿನ ಸಡಿಲಿಕೆಯನ್ನು ನೀಡಲಾಗಿದೆ. ವಯಸ್ಸಿನ ಅರ್ಹತೆಯನ್ನು ದಿನಾಂಕ 01-07-2025 ಕ್ಕೆ ಪರಿಗಣಿಸಲಾಗುತ್ತದೆ. ಹಾಗಾಗಿ, ಅಭ್ಯರ್ಥಿಗಳು ವಯಸ್ಸಿನ ಮಿತಿ ಸಡಿಲಿಕೆಯ ಸದ್ಬಳಕೆ ಮಾಡಿಕೊಂಡು ಉದ್ಯೋಗ ಗಿಟ್ಟಿಸಿಕೊಳ್ಳಬಹುದಾಗಿದೆ.
ರೈಲ್ವೆ ಗ್ರೂಪ್ ಡಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಕಂಪ್ಯೂಟರ್ ಆಧಾರಿತ ಪರೀಕ್ಷೆ, ದೈಹಿಕ ಸಾಮರ್ಥ್ಯ ಪರೀಕ್ಷೆ, ಮೂಲದಾಖಲೆಗಳ ಪರಿಶೀಲನೆ ಮತ್ತು ವೈದ್ಯಕೀಯ ಪರೀಕ್ಷೆಗಳು ಇರುತ್ತದೆ. ರೈಲ್ವೆಯು ಗ್ರೂಪ್ ಡಿ ಹುದ್ದೆಗೆ ಸಿಬಿಟಿ ಪರೀಕ್ಷೆಯನ್ನು ಕೇವಲ ಒಂದು ಹಂತದಲ್ಲಿ ಅಥವಾ ಎರಡು ಹಂತದಲ್ಲಿ ನಡೆಸುವ ಅಧಿಕಾರವನ್ನು ಹೊಂದಿದೆ. ರೈಲ್ವೆ ಗ್ರೂಪ್ ಡಿ ಉದ್ಯೋಗಿಗಳು ರೈಲ್ವೆಯಲ್ಲಿ ಮೇಂಟೆನೆನ್ಸ್, ಸ್ವಚ್ಛತೆ, ಟ್ರ್ಯಾಕ್ ನಿರ್ವಹಣೆ ಜವಾಬ್ದಾರಿಗಳನ್ನು ನಿರ್ವಹಿಸಬೇಕಾಗಿರುತ್ತದೆ.
ಇನ್ನು, ಕರ್ನಾಟಕದ ಅಭ್ಯರ್ಥಿಗಳು ಈ ರೈಲ್ವೆ ಗ್ರೂಪ್ ಡಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು www.rrbbnc.gov.in ಗೆ ಭೇಟಿ ನೀಡಬಹುದಾಗಿದೆ. ಸಾಮಾನ್ಯ ಅರ್ಹತೆ, ಒಬಿಸಿ, ಆರ್ಥಿಕವಾಗಿ ಹಿಂದುಳಿದ ಕೆಟಗರಿಯವರಿಗೆ ರೂ.500 ರೂ. ಅರ್ಜಿ ಶುಲ್ಕ ಇದೆ. ಬಳಿಕ ಇದರಲ್ಲಿ400 ರೂಪಾಯಿ ರೀಫಂಡ್ ಮಾಡಲಾಗುತ್ತದೆ. ವಿಶೇಷ ಚೇತನರು, ಮಹಿಳಾ, ತೃತೀಯ ಲಿಂಗಿಗಳು, ಮಾಜಿ ಸೈನಿಕರು, ಎಸ್ಸಿ, ಎಸ್ಟಿ ಅಭ್ಯರ್ಥಿಗಳಿಗೆ 250 ರೂ. ಶುಲ್ಕ ನಿಗದಿಪಡಿಸಲಾಗಿದೆ. ಒಟ್ಟಿನಲ್ಲಿ ಕೇಂದ್ರ ಸರ್ಕಾರಿ ನೌಕರಿ ಪಡೆಯಲು ಸುವರ್ಣಾವಕಾಶ ನೀಡಲಾಗಿದ್ದು, ಅಭ್ಯರ್ಥಿಗಳು ಸಕಲ ರೀತಿಯಲ್ಲಿ ಸಜ್ಜಾದರೆ ಕನಸು ನನಸು ಮಾಡಿಕೊಳ್ಳಬಹುದಾಗಿದೆ.