ಗುವಾಹಟಿ: ಡೀಸೆಲ್ ಟ್ಯಾಂಕ್ ನಲ್ಲಿ ಬರೋಬ್ಬರಿ 30 ಕೋಟಿ ರೂ. ಮೌಲ್ಯದ ಡ್ರಗ್ಸ್ ಇಟ್ಟು ಸಾಗಿಸಲಾಗುತ್ತಿದ್ದ ಖದೀಮರನ್ನು ಪೊಲೀಸರು ಬಂಧಿಸಿದ್ದಾರೆ.
ಡ್ರಗ್ಸ್ ಗೆ ಸಂಬಂಧಿಸಿದ ಮಾತ್ರೆ (Yaba Tablets) ಸಾಗಿಸುತ್ತಿದ್ದ ಕರಾಳ ದಂಧೆಕೋರರನ್ನು ಅಸ್ಸಾಂನ ಕರೀಗಂಜ್ ಪೊಲೀಸರು (Karimganj Police) ಬಂಧಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರನ್ನು (Drug Peddlers) ಬಂಧಿಸಿದ್ದಾರೆ. ಅಲ್ಲದೇ, ಬಂಧಿತರಿಂದ 30 ಕೋಟಿ ರೂ. ಮೌಲ್ಯದ 1 ಲಕ್ಷ ಮಾತ್ರೆಗಳನ್ನು ವಶಕ್ಕೆ ಪಡೆದಿದ್ದಾರೆ.
ಬಂಧಿತ ಆರೋಪಿಗಳನ್ನು ನಜ್ಮುಲ್ ಹುಸೇನ್ ಮತ್ತು ಮುತ್ಲಿಬ್ ಅಲಿ ಎಂದು ಗುರುತಿಸಲಾಗಿದೆ. ಕರೀಂಗಂಜ್ ಜಿಲ್ಲೆಯ ರತಾಬರಿ ಪೊಲೀಸ್ ಠಾಣೆ ವ್ಯಾಪ್ತಿಯ ಗಂಧರಾಜ್ ಬರಿ ಪ್ರದೇಶದಲ್ಲಿ ಮಾದಕ ದ್ರವ್ಯ ವಿರೋಧಿ ಕಾರ್ಯಾಚರಣೆ ಸಂದರ್ಭದಲ್ಲಿ ದಂಧೆಕೋರರು ಸಿಕ್ಕಿಬಿದ್ದಿದ್ದು, ಅವರಿಂದ ಡ್ರಗ್ಸ್ ರೂಪದ ಯಾಬಾ ಮಾತ್ರೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಮಿಜೋರಂ ಕಡೆಯಿಂದ ಯಾಬಾ ಮಾತ್ರೆಗಳನ್ನು ಸಾಗಿಸುತ್ತಿರುವುದಾಗಿ ಮಾಹಿತಿ ಬಂದಿತ್ತು. ತಕ್ಷಣ ರಟಾಬರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಾಕಾಬಂಧಿ ರಚಿಸಿ ತಪಾಸಣೆ ಶುರು ಮಾಡಿದ್ದೆವು. ಡೀಸೆಲ್ ಟ್ಯಾಂಕ್ (Diesel Tank) ಪರಿಶೀಲಿಸಿದಾಗ ಯಾಬಾ ಮಾತ್ರೆಗಳುಳ್ಳ 10 ಪ್ಯಾಕೆಟ್ ಪತ್ತೆಯಾಯಿತು. ಬಳಿಕ ಮಾತ್ರೆಗಳನ್ನು ವಶಪಡಿಸಿಕೊಂಡು ಇಬ್ಬರನ್ನು ಬಂಧಿಸಲಾಯಿತು. ಮಾದಕ ವಸ್ತುಗಳ ಮಾರುಕಟ್ಟೆಯಲ್ಲಿ ಈ ಮಾತ್ರೆಗಳ ಮೌಲ್ಯ ಸುಮಾರು 30 ಕೋಟಿ ರೂ. ಇದೆ ಎಂದು ಪೊಲೀಸರು ಹೇಳಿದ್ದಾರೆ.