ವಿಯನ್ನಾ. ಈ ಕಂದಮ್ಮನಿಗಿನ್ನೂ ಕೇವಲ ಮೂರೇ ಮೂರು ವರ್ಷ.ಆದರೆ, ಈ ಪುಟಾಣಿಗೆ ಮಾರಣಾಂತಿಕ ಬ್ರೇನ್ ಟ್ಯೂಮರ್ ಬಾಧಿಸಿತ್ತು. ಕಳೆದ ಡಿಸೆಂಬರ್ ನಲ್ಲಿ ವಿಯನ್ನಾಗೆ ಮುಂಬೈನಲ್ಲಿ ಶಸ್ತ್ರ ಚಿಕಿತ್ಸೆ ಮಾಡಸಲಾಗಿತ್ತು. ಇದಾದ ಬಳಿಕ ಆಕೆಯ ಆರೋಗ್ಯದಲ್ಲಿ ಅಲ್ಪ ಚೇತರಿಕೆ ಕೂಡಾ ಕಂಡಿತ್ತು. ವೃತ್ತಿಯಲ್ಲಿ ಐಟಿ ಉದ್ಯೋಗಿಗಳಾದ ಪಿಯೂಶ್ ಹಾಗೂ ವರ್ಷಾ ದಂಪತಿ ಪುತ್ರಿ. ಮೂಲತ ಇಂದೋರಿನ ನಿವಾಸಿಗಳಾಗಿದ್ದು, ಜೈನ ಧರ್ಮದ ಅನುಯಾಯಿಗಳಾಗಿದ್ದಾರೆ. ಯಾವಾಗ ಮಗಳ ಆರೋಗ್ಯ ಕ್ಷೀಣಿಸಿತ್ತು. ಆಗ ಜೈನ ಮುನಿಗಳ ಮೊರೆಹೋಗಿದ್ದರು.
40 ನಿಮಿಷದಲ್ಲಿ ಹಾರಿತು ಕಂದಮ್ಮನ ಪ್ರಾಣ ಪಕ್ಷಿ
ಮುಂಬೈನಲ್ಲಿ ಸರ್ಜರಿ ಮಾಡಿಸಿದ ಬಳಿಕ ಪುಟಾಣಿ ಆರೋಗ್ಯದಲ್ಲಿ ಚೇತರಿಕೆ ಕಾಣಲೇ ಇಲ್ಲ. ಮಾರ್ಚ್ 15 ರಂದು ಮತ್ತೆ ವಿಯನ್ನಾಳನ್ನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅನ್ನಾಹಾರ ಸೇವಿಸಲಾಗದಷ್ಟು ಅಶಕ್ತಳಾಗಿದ್ದಳು. ಕೇವಲ ದ್ರವಾಹಾರ ನೀಡುವಂತೆ ವೈದ್ಯರು ಸೂಚಿಸಿದ್ದರೂ ಮಾರ್ಚ್ 18ರ ವೇಳೆಗೆ ಅದನ್ನೂ ಅರಗಿಸಿಕೊಳ್ಳುವ ಶಕ್ತಿಯನ್ನು ಪುಟಾಣಿ ಕಳೆದುಕೊಂಡಿದ್ದಳು.
ಅಲ್ಲಿಗೆ ಎಲ್ಲ ಭರವಸೆಗಳನ್ನೂ ಕಳೆದುಕೊಂಡ ದಂಪತಿ ಜೈನ ಮುನಿ, ರಾಜೇಶ್ ಮಹಾರಾಜರನ್ನು ಭೇಟಿ ಮಾಡಿತ್ತು. ಮಗುವಿನ ಪರಿಸ್ಥಿತಿ ಕಂಡ ಮುನಿಗಳು, ಬದುಕುವ ಅವಕಾಶ ಇಲ್ಲವೇ ಇಲ್ಲ, ಸಲ್ಲೇಖನ ವ್ರತದ ಮೂಲಕ ದೇಹ ತ್ಯಾಗ ಮಾಡಿದರೆ ಒಳಿತು ಅಂದಿದ್ದರು. ಅಷ್ಟೇ, ಅನ್ನಾಹಾರ ಜೀರ್ಣಿಸಲಾಗದ ಜೀವವನ್ನು ಹೆತ್ತವರು ಸಲ್ಲೇಖನ ವ್ರತಕ್ಕೆ ಒಪ್ಪಿಗೆ ನೀಡಿದರು. ಕೇವಲ ಗಾಳಿ ಸೇವಿಸುತ್ತಿದ್ದ ಮಗು, ಕಣ್ಣೆದುರೇ 40 ನಿಮಿಷದಲ್ಲಿ ಪ್ರಾಣತೆತ್ತಿತ್ತು. ವಿಯನ್ನಾಳ ಈ ವ್ರತ ಅತ್ಯಂತ ಪುಟ್ಟ ವಯಸ್ಸಿಗೆ ದೊಡ್ಡ ಸಾಧನೆ ಅನ್ನೋ ಹೆಸರಲ್ಲಿ ಅಮೆರಿಕದ ಗೋಲ್ಡನ್ ಬುಕ್ ಆಫ್ ರೆಕಾರ್ಡ್ ನಲ್ಲಿ ದಾಖಲಾಗಿದೆ.



















