ಮುಂಬಯಿ: ಕರ್ನಾಟಕದ ಪಕ್ಕದ ರಾಜ್ಯ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯ ಕಣ ರಂಗೇರಿದೆ. ನ. 20ಕ್ಕೆ ಮಹಾರಾಷ್ಟ್ರದಲ್ಲಿ ಮತದಾನ ನಡೆಯಲಿದೆ. ಹೀಗಾಗಿ ಮತದಾರರನ್ನು ಸೆಳೆಯಲು ಪಕ್ಷಗಳು ತಂತ್ರ ನಡೆಸುತ್ತಿವೆ.
ಈ ಮಧ್ಯೆ ಮಹಾ ವಿಕಾಸ್ ಅಘಾಡಿ ಮೈತ್ರಿಕೂಟವು ಚುನಾವಣಾ ಗ್ಯಾರಂಟಿ ಘೋಷಿಸಿದ್ದು, ಮಹಿಳೆಯರಿಗೆ ತಿಂಗಳಿಗೆ 3 ಸಾವಿರ ರೂ, ರಾಜ್ಯ ಸಾರಿಗೆ ಬಸ್ ಗಳಲ್ಲಿ ಉಚಿತ ಪ್ರಯಾಣದ ಭರವಸೆ ನೀಡಿದೆ. ಅಲ್ಲದೇ, 3 ಲಕ್ಷ ರೂ. ಕೃಷಿ ಸಾಲ ಮನ್ನಾ ಮಾಡುವುದಾಗಿ ಘೋಷಿಸಿದೆ.
ಮಹಾ ವಿಕಾಸ್ ಅಘಾಡಿ ಗೆಲುವು ಸಾಧಿಸಿದರೆ, ಕೃಷಿ ಸಮೃದ್ಧಿ ಯೋಜನೆಯಡಿಯಲ್ಲಿ 3 ಲಕ್ಷದವರೆಗಿನ ಕೃಷಿ ಸಾಲವನ್ನು ಮನ್ನಾ ಮಾಡಲಾಗುವುದು ಎಂದು ಚುನಾವಣಾ ಭರವಸೆಯಲ್ಲಿ ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ತಿಳಿಸಿದ್ದಾರೆ. ನಿರುದ್ಯೋಗಿ ಯುವಕರಿಗೆ ಮಾಸಿಕ 4 ಸಾವಿರ ರೂ. ನೀಡಲಾಗುವುದು ಎಂದು ಚುನಾವಣಾ ಗ್ಯಾರಂಟಿ ಬಿಡುಗಡೆಯ ಸಂದರ್ಭದಲ್ಲಿ ಉದ್ಧವ್ ಠಾಕ್ರೆ ಹೇಳಿದ್ದಾರೆ.
ಮಹಾರಾಷ್ಟ್ರದ ಬಿಜೆಪಿ-ಶಿವಸೇನೆ-ಎನ್ ಸಿಪಿ ಸರ್ಕಾರವು ಲಡ್ಕಿ ಬಹಿನ್ ಯೋಜನೆಯಡಿ ಅರ್ಹ ಮಹಿಳೆಯರಿಗೆ ಮಾಸಿಕ 1,500 ರೂ. ನೀಡುತ್ತಿದೆ. ಅಲ್ಲದೇ, ಮತ್ತೆ ಅಧಿಕಾರಕ್ಕೆ ಬಂದರೆ, ಈ ಮೊತ್ತವನ್ನು 2,100 ರೂ. ಗೆ ಏರಿಸುವುದಾಗಿ ಭರವಸೆ ನೀಡಿದೆ.