ವಾಷಿಂಗ್ಟನ್: ಅಧಿಕಾರಕ್ಕೇರಿದ ದಿನದಿಂದಲೂ ಜಗತ್ತಿನ ಎಲ್ಲ ದೇಶಗಳಿಗೂ ನಿರಂತರವಾಗಿ ಶಾಕ್ ನೀಡುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಈಗ ಅಮೆರಿಕದಲ್ಲಿ ವ್ಯಾಸಂಗ ಮಾಡುತ್ತಿರುವ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳನ್ನೂ ಆತಂಕಕ್ಕೆ ನೂಕಿದ್ದಾರೆ. ಅಮೆರಿಕ ಕಾಂಗ್ರೆಸ್‌ನಲ್ಲಿ ಹೊಸ ಮಸೂದೆಯೊಂದನ್ನು ಮಂಡಿಸಲಾಗಿದ್ದು, ಇದು ಅಂತಾರಾಷ್ಟ್ರೀಯ ವಿದ್ಯಾರ್ಥಿಗಳಲ್ಲಿ, ವಿಶೇಷವಾಗಿ ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಗಣಿತ (ಸ್ಟೆಮ್) ಕೋರ್ಸ್ ಗಳನ್ನು ಮಾಡುತ್ತಿರುವವರಲ್ಲಿ ಹೊಸ ಗೊಂದಲ ಹಾಗೂ ಭೀತಿಗೆ ಕಾರಣವಾಗಿದೆ. ಪದವಿ ಪಡೆದ ನಂತರ ಮೂರು ವರ್ಷಗಳವರೆಗೆ ಅಮೆರಿಕದಲ್ಲಿ ಉಳಿಯಲು ಹಾಗೂ ಕೆಲಸ ಮಾಡಲು ಅನುವು ಮಾಡಿಕೊಡುವ “ಐಚ್ಛಿಕ ಪ್ರಾಯೋಗಿಕ ತರಬೇತಿ” (ಒಪಿಟಿ) ಕಾರ್ಯಕ್ರಮವನ್ನು(US Work Visa) ಕೊನೆಗಾಣಿಸುವ ಮಸೂದೆ ಇಂದಾಗಿದೆ.
ವೃತ್ತಿಪರ ಅನುಭವವನ್ನು ಪಡೆಯಲು ಮತ್ತು ದೀರ್ಘಾವಧಿಯ ಉದ್ಯೋಗ ವೀಸಾಗಳಿಗೆ ಪರಿವರ್ತನೆಗೊಳ್ಳಲು ಒಪಿಟಿಯನ್ನೇ ಅವಲಂಬಿಸಿರುವ ಅಮೆರಿಕದಲ್ಲಿರುವ ಸಾವಿರಾರು ಭಾರತೀಯ ವಿದ್ಯಾರ್ಥಿಗಳ ವೃತ್ತಿಜೀವನದ ಭವಿಷ್ಯಕ್ಕೆ ಈ ಮಸೂದೆ ತಡೆಯೊಡ್ಡಲಿದೆ ಎಂದು ಮೂಲಗಳು ತಿಳಿಸಿವೆ.
ಓಪನ್ ಡೋರ್ಸ್ 2024 ವರದಿಯ ಪ್ರಕಾರ, 2023-2024ರ ಶೈಕ್ಷಣಿಕ ವರ್ಷದಲ್ಲಿ ಅಮೆರಿಕಕ್ಕೆ ಅತಿ ಹೆಚ್ಚು ಭಾರತೀಯ ವಿದ್ಯಾರ್ಥಿಗಳು ವ್ಯಾಸಂಗಕ್ಕಾಗಿ ಬಂದಿದ್ದಾರೆ. ಒಟ್ಟು 3,31,602 ಭಾರತೀಯ ವಿದ್ಯಾರ್ಥಿಗಳು ಅಮೆರಿಕಕ್ಕೆ ತೆರಳಿದ್ದು, ಹಿಂದಿನ ವರ್ಷಕ್ಕೆ ಹೋಲಿಸಿದರೆ ಇದು ಶೇಕಡಾ 23 ರಷ್ಟು ಹೆಚ್ಚಾಗಿದೆ.

ಈ ಪೈಕಿ ಸುಮಾರು 97,556 ವಿದ್ಯಾರ್ಥಿಗಳು ಐಚ್ಛಿಕ ಪ್ರಾಯೋಗಿಕ ತರಬೇತಿಯಲ್ಲಿ (ಒಪಿಟಿ) ಭಾಗವಹಿಸಿದ್ದರು. ಅಂದರೆ ಹಿಂದಿನ ವರ್ಷಕ್ಕೆ ಹೋಲಿಸಿದರೆ ಇದು ಶೇಕಡಾ 41 ರಷ್ಟು ಹೆಚ್ಚು.
ಈ ಹಿಂದೆಯೂ ಸರ್ಕಾರ ಒಪಿಟಿಯನ್ನು ರದ್ದು ಮಾಡಲು ಯತ್ನಿಸಿ ವಿಫಲವಾಗಿತ್ತು. ಆದರೆ, ಟ್ರಂಪ್ ಆಡಳಿತವು ವಲಸೆ ವಿರೋಧಿ ನೀತಿಯನ್ನು ಅನುಸರಿಸುತ್ತಿರುವ ಕಾರಣ ಈ ಮಸೂದೆಗೂ ಅಂಗೀಕಾರ ದೊರೆಯಬಹುದು ಎಂಬ ಆತಂಕದಲ್ಲಿ ವಿದ್ಯಾರ್ಥಿಗಳಿದ್ದಾರೆ.
ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ತಜ್ಞರು ಹೇಳೋದೇನು?
“ಒಪಿಟಿಯು ವಿದ್ಯಾರ್ಥಿಗಳಿಗೆ ಪದವಿ ಪಡೆದ ನಂತರ ಒಂದು ವರ್ಷದವರೆಗೆ ಅಮೆರಿಕದಲ್ಲಿ ಉದ್ಯೋಗ ಅರಸಲು ಅನುವು ಮಾಡಿಕೊಡುತ್ತದೆ. ಅದರಲ್ಲೂ ವಿದ್ಯಾರ್ಥಿಗಳು ಸ್ಟೆಮ್ ಪದವೀಧರರಾಗಿದ್ದರೆ ಮತ್ತು ಅರ್ಹ ಯುಎಸ್ ಉದ್ಯೋಗದಾತರೊಂದಿಗೆ ಕೆಲಸ ಮಾಡುತ್ತಿದ್ದರೆ, ಅಲ್ಲೇ ಉಳಿಯಬಹುದಾದ ಅವಧಿ ಇನ್ನೂ ಎರಡು ವರ್ಷಗಳವರೆಗೆ ವಿಸ್ತರಿಸಬಹುದಾಗಿತ್ತು” ಎಂದು ವಲಸೆ ಕಾನೂನು ಸಂಸ್ಥೆ ಲಾಕ್ವೆಸ್ಟ್ ಸಂಸ್ಥಾಪಕ ಪೂರ್ವಿ ಚೋಥಾನಿ ಹೇಳಿದ್ದಾರೆ. ಆದರೆ, ಈಗ ಮಸೂದೆ ಅಂಗೀಕಾರವಾದರೆ, ಒಪಿಟಿ ಕೊನೆಗೊಳ್ಳುತ್ತದೆ. ಮತ್ತೊಂದು ಕೆಲಸದ ವೀಸಾಕ್ಕೆ ಪರಿವರ್ತನೆಗೊಳ್ಳುವ ಆಯ್ಕೆ ವಿದ್ಯಾರ್ಥಿಗಳಿಗೆ ಇರುವುದಿಲ್ಲ. ಹೀಗಾಗಿ ಅವರು ವ್ಯಾಸಂಗ ಮುಗಿದ ಕೂಡಲೇ ಅಮೆರಿಕವನ್ನು ತೊರೆಯಬೇಕಾಗುತ್ತದೆ” ಎಂದೂ ಅವರು ಹೇಳಿದ್ದಾರೆ.