ನವದೆಹಲಿ: ಪ್ರಯಾಗರಾಜ್ ನಲ್ಲಿ ನಡೆಯುತ್ತಿರುವ ಕುಂಭಮೇಳಕ್ಕೆ ಜನಸಾಗರವೇ ಹರಿದು ಬರುತ್ತಿದೆ. ಈ ಕುಂಭ ಮೇಳ ಮುಂದಿನ ವಾರ ಸಮಾಪ್ತಿಗೊಳ್ಳುತ್ತದೆ. ಜನವರಿ 13ರಂದು ಆರಂಭವಾಗಿರುವ ಈ ಕುಂಭ ಮೇಳ ಈ ಬಾರಿ ಭಾರೀ ವಿಶೇಷತೆ ಪಡೆದಿತ್ತು.
ಆರು ವಾರದಲ್ಲಿ ಒಟ್ಟು 40 ಕೋಟಿ ಭಕ್ತರು ಆಗಮಿಸಬಹುದು ಎಂದು ಭಾವಿಸಲಾಗಿತ್ತು. ಆದರೆ, ಇಲ್ಲಿಯವರೆಗಿನ ಸಂಖ್ಯೆ 55 ಕೋಟಿ ಮೀರಿದೆ. ಇನ್ನೊಂದು ವಾರ ಬಾಕಿ ಇದ್ದು ಒಟ್ಟು ಜನಭೇಟಿ ಸಂಖ್ಯೆ 60 ಕೋಟಿಗಿಂತಲೂ ಅಧಿಕ ಜನರು ಪ್ರಯಾಗರಾಜ್ ಗೆ ಆಗಮಿಸಬಹುದು ಎಂದು ಅಂದಾಜಿಸಲಾಗಿದೆ.
ಈ ಮೂಲಕ ದಾಖಲೆಯನ್ನು ಕೂಡ ಈ ಮೇಳ ಬರೆದಿದೆ. ಇಲ್ಲಿಯವರೆಗೆ ಯಾವುದೇ ಒಂದು ಕಾರ್ಯಕ್ರಮಕ್ಕೆ ಇಷ್ಟೊಂದು ಜನರು ಭಾಗವಹಿಸಿರುವ ನಿದರ್ಶನ ಇಲ್ಲ. ಅಲ್ಲದೇ, ಇದು ಆರ್ಥಿಕತೆಗೆ ಪುಷ್ಟಿ ಕೊಡುವ ಬಹುದೊಡ್ಡ ಮಾರುಕಟ್ಟೆಯೇ ಆಗಿಹೋಗಿದೆ.
ಮಹಾಕುಂಭಮೇಳದಲ್ಲಿ ವಿವಿಧ ವಸ್ತುಗಳ ವ್ಯಾಪಾರ, ಸಾರಿಗೆ ಸೇರಿದಂತೆ 2 ಲಕ್ಷ ಕೋಟಿ ರೂ. ಗೂ ಅಧಿಕ ವ್ಯಾಪಾರವಾಗುವ ನಿರೀಕ್ಷೆ ಮಾಡಲಾಗಿತ್ತು. ಆದರೆ, ಈಗ ಮೂರು ಲಕ್ಷ ಕೋಟಿ ರೂ ಬಿಸಿನೆಸ್ ಆಗಬಹುದು ಎಂದು ಅಖಿಲ ಭಾರತ ವ್ಯಾಪಾರಿಗಳ ಮಹಾ ಒಕ್ಕೂಟವಾದ ಸಿಎಐಟಿಟಿ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಖಂಡೇಲವಾಲ್ ಹೇಳಿದ್ದಾರೆ.
ಜನರು ಉತ್ತರಪ್ರದೇಶದ ಇತರ ಧಾರ್ಮಿಕ ಕ್ಷೇತ್ರಗಳತ್ತಲೂ ಹೋಗುತ್ತಿದ್ದಾರೆ. ಅದರಲ್ಲೂ ಹೊಸದಾಗಿ ನಿರ್ಮಾಣವಾಗಿರುವ ಅಯೋಧ್ಯೆ ರಾಮನ ಮಂದಿರ, ಕಾಶಿ ಮೊದಲಾದ ಪುಣ್ಯ ಕ್ಷೇತ್ರಗಳಿಗೆ ಭೇಟಿ ನೀಡುತ್ತಿದ್ದಾರೆ. ಅಲ್ಲಿಯೂ ಕೂಡ ಬಿಸಿನೆಸ್ ಚುರುಕುಗೊಳ್ಳುವಂತೆ ಮಾಡಿದೆ. ಕರ್ನಾಟಕದ 2024-25ರ ಬಜೆಟ್ನ ಗಾತ್ರ 3.72 ಲಕ್ಷ ಕೋಟಿ ರೂ ಇತ್ತು. ಹೆಚ್ಚೂಕಡಿಮೆ ಅಷ್ಟು ಪ್ರಮಾಣದ ಬಿಸಿನೆಸ್ ಅನ್ನು ಕುಂಭಮೇಳ ದಕ್ಕಿಸಿದೆ.