ವಡೋದರಾ: ಗುಜರಾತ್‌ನ ವಡೋದರ ಜಿಲ್ಲೆಯ ಪಾದ್ರಾ ತಾಲೂಕಿನಲ್ಲಿರುವ ಗಂಭೀರಾ-ಮುಜ್‌ಪುರ್ ಸೇತುವೆಯು ಇಂದು (ಬುಧವಾರ) ಕುಸಿದು ಬಿದ್ದಿದ್ದು, ಪರಿಣಾಮ ಮೂವರು ಸಾವನ್ನಪ್ಪಿದ ಘಟನೆ ನಡೆದಿದೆ. ಇದೇ ವೇಳೆ, ಸೇತುವೆಯು ಕುಸಿಯುತ್ತಿದ್ದಂತೆಯೇ ಅದರಲ್ಲಿ ಸಾಗುತ್ತಿದ್ದ ಹಲವು ವಾಹನಗಳು ಮಹಿಸಾಗರ (ಮಹಿ) ನದಿಗೆ ಬಿದ್ದ ಆಘಾತಕಾರಿ ಘಟನೆ ಸಂಭವಿಸಿದೆ. ಇದರ ಫೋಟೋ, ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಆನಂದ್ ಮತ್ತು ವಡೋದರಾ ಜಿಲ್ಲೆಗಳನ್ನು ಸಂಪರ್ಕಿಸುವ ಈ ಸೇತುವೆ ಬೆಳಗಿನ ಜಾವ ಅತಿಹೆಚ್ಚು ದಟ್ಟಣೆಯ ಸಮಯದಲ್ಲೇ ಕುಸಿದು ಬಿದ್ದಿದೆ. ಪರಿಣಾಮ ಮೂವರು ಅಸುನೀಗಿದರೆ, ಇತರ ಮೂವರು ಗಾಯಗೊಂಡಿದ್ದಾರೆ.
ಪ್ರಾಥಮಿಕ ವರದಿಗಳ ಪ್ರಕಾರ, ಎರಡು ಟ್ರಕ್‌ಗಳು, ಒಂದು ಬೊಲೆರೊ ಎಸ್‌ಯುವಿ ಮತ್ತು ಒಂದು ಪಿಕಪ್ ವ್ಯಾನ್ ಸೇರಿದಂತೆ ನಾಲ್ಕು ವಾಹನಗಳು ಸೇತುವೆ ದಾಟುತ್ತಿದ್ದಾಗ ಏಕಾಏಕಿ ಸೇತುವೆ ಕುಸಿದು ಬಿದ್ದಿದೆ. ಸೇತುವೆ ಕುಸಿಯುವ ಮೊದಲು ದೊಡ್ಡ ಶಬ್ದ ಕೇಳಿಬಂತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಕೂಡಲೇ ಅಗ್ನಿಶಾಮಕ ದಳ, ಸ್ಥಳೀಯ ಪೊಲೀಸರು ಮತ್ತು ವಡೋದರಾ ಜಿಲ್ಲಾಡಳಿತದ ತಂಡಗಳು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆಯನ್ನು ಆರಂಭಿಸಿವೆ. ಸ್ಥಳೀಯರೂ ಸಹ ರಕ್ಷಣಾ ಕಾರ್ಯದಲ್ಲಿ ಕೈಜೋಡಿಸಿದ್ದು, ಗಾಯಗೊಂಡವರನ್ನು ಹೊರತೆಗೆಯಲು ನೆರವಾಗಿದ್ದಾರೆ. ಇದುವರೆಗೆ ಮೂವರನ್ನು ರಕ್ಷಿಸಿ ಹತ್ತಿರದ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.
ಘಟನೆ ನಡೆದ ಕೆಲವೇ ಕ್ಷಣಗಳಲ್ಲಿ ಪಾದ್ರಾ ಶಾಸಕ ಚೈತನ್ಯಸಿಂಗ್ ಝಾಲಾ ಅವರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಅಧಿಕಾರಿಗಳು ಪ್ರದೇಶವನ್ನು ಸುತ್ತುವರಿದು, ಸೇತುವೆ ಕುಸಿತಕ್ಕೆ ಕಾರಣವನ್ನು ಪತ್ತೆಹಚ್ಚಲು ತನಿಖೆ ಆರಂಭಿಸಿದ್ದಾರೆ.
ಕೇಂದ್ರ ಗುಜರಾತ್ ಅನ್ನು ಸೌರಾಷ್ಟ್ರಕ್ಕೆ ಸಂಪರ್ಕಿಸುವ ಪ್ರಮುಖ ಸೇತುವೆಯಾದ ಇದು, ಆನಂದ್, ವಡೋದರ, ಭರೂಚ್ ಮತ್ತು ಅಂಕಲೇಶ್ವರ ನಡುವೆ ಪ್ರಯಾಣಿಸುವವರಿಗೆ ಅತ್ಯಗತ್ಯವಾಗಿದೆ. ಆದರೆ, ಈ ಸೇತುವೆಯನ್ನು ಆಡಳಿತವು ಬಹಳ ಸಮಯದಿಂದ ನಿರ್ಲಕ್ಷಿಸಿದೆ ಎಂದು ಅವರು ಸ್ಥಳೀಯರು ಆಪಾದಿಸಿದ್ದಾರೆ. “ಗಂಭೀರಾ ಸೇತುವೆ ಕೇವಲ ಸಂಚಾರದ ಅಪಾಯವಲ್ಲದೆ, ಆತ್ಮಹತ್ಯಾ ಸ್ಥಳವಾಗಿಯೂ ಕುಖ್ಯಾತಿ ಪಡೆದಿತ್ತು. ಇದರ ಸ್ಥಿತಿಯ ಬಗ್ಗೆ ಪದೇ ಪದೇ ಎಚ್ಚರಿಕೆ ನೀಡಿದರೂ ನಿರ್ಲಕ್ಷಿಸಲಾಗಿತ್ತು,” ಎಂದು ಸ್ಥಳೀಯ ನಿವಾಸಿಗಳಲ್ಲಿ ಒಬ್ಬರು ಹೇಳಿದ್ದಾರೆ.
ಹಿರಿಯ ಕಾಂಗ್ರೆಸ್ ನಾಯಕ ಅಮಿತ್ ಚಾವ್ಡಾ ಅವರು ಸಾಮಾಜಿಕ ಜಾಲತಾಣದಲ್ಲಿ, “ಆನಂದ್ ಮತ್ತು ವಡೋದರಾ ಜಿಲ್ಲೆಗಳನ್ನು ಸಂಪರ್ಕಿಸುವ ಪ್ರಮುಖ ಗಂಭೀರಾ ಸೇತುವೆ ಕುಸಿದಿದೆ. ಅನೇಕ ವಾಹನಗಳು ನದಿಗೆ ಬಿದ್ದಿದ್ದು, ದೊಡ್ಡ ಪ್ರಮಾಣದ ಸಾವು-ನೋವುಗಳಾಗುವ ಭೀತಿ ಇದೆ. ಆಡಳಿತವು ತಕ್ಷಣ ರಕ್ಷಣಾ ಕಾರ್ಯಾಚರಣೆ ನಡೆಸಬೇಕು ಮತ್ತು ಸಂಚಾರಕ್ಕೆ ಪರ್ಯಾಯ ಮಾರ್ಗಗಳನ್ನು ಏರ್ಪಡಿಸಬೇಕು” ಎಂದು ಪೋಸ್ಟ್ ಮಾಡಿದ್ದಾರೆ.
ಕೆಲವರು ನಾಪತ್ತೆಯಾಗಿರುವ ಶಂಕೆಯಿದ್ದು, ಅವರಿಗಾಗಿ ನದಿಯಲ್ಲಿ ಶೋಧ ಕಾರ್ಯ ಮುಂದುವರಿದಿದೆ. ಮುಳುಗಿದ ವಾಹನಗಳನ್ನು ಹೊರತೆಗೆಯಲು ಕ್ರೇನ್‌ಗಳನ್ನು ಬಳಸಲಾಗುತ್ತಿದೆ.