ಒಳ್ಳೆಯ ಸ್ಯಾಲರಿ ಇರುತ್ತದೆ, ಖರ್ಚಿನ ಮೇಲೂ ನಿಗಾ ಇರುತ್ತದೆ. ಇಷ್ಟಾದರೂ ತುಂಬ ಜನರಿಗೆ ಕ್ರೆಡಿಟ್ ಕಾರ್ಡ್ ಇಟ್ಟುಕೊಳ್ಳುವುದು ಎಂದರೆ ಭಯ. ಕ್ರೆಡಿಟ್ ಕಾರ್ಡ್ ಇಟ್ಟುಕೊಂಡರೆ ಹೆಚ್ಚಿನ ಖರ್ಚಾಗುತ್ತದೆ. ಸರಿಯಾದ ಸಮಯಕ್ಕೆ ಬಿಲ್ ಪಾವತಿಸದಿದ್ದರೆ ಹೆಚ್ಚಿನ ಬಡ್ಡಿ ಕಟ್ಟಬೇಕಾಗುತ್ತದೆ. ನಮ್ಮ ಬಳಿ ಇರುವ ದುಡ್ಡಿನಲ್ಲೇ ಖರ್ಚು ಮಾಡೋಣ ಎಂದು ಕ್ರೆಡಿಟ್ ಕಾರ್ಡ್ ಸಹವಾಸಕ್ಕೆ ಹೋಗುವುದಿಲ್ಲ.
ಕ್ರೆಡಿಟ್ ಕಾರ್ಡ್ ಇಟ್ಟುಕೊಳ್ಳದಿರುವುದು ಒಂದು ದೃಷ್ಟಿಯಿಂದ ಒಳ್ಳೆಯದಾದರೂ, ಬ್ಯಾಂಕಿನಲ್ಲಿ ಗೃಹ ಸಾಲ, ವಾಹನ ಸಾಲ ಪಡೆಯುವಾಗ ಕ್ರೆಡಿಟ್ ಸ್ಕೋರ್ ಚೆಕ್ ಮಾಡಲಾಗುತ್ತದೆ. ಕ್ರೆಡಿಟ್ ಕಾರ್ಡ್ ಬಳಸುತ್ತಿದ್ದರೆ ಕ್ರೆಡಿಟ್ ಸ್ಕೋರ್ ಮೇಂಟೇನ್ ಮಾಡಬಹುದಾಗಿದೆ. ಹಾಗಂತ, ಕ್ರೆಡಿಟ್ ಕಾರ್ಡ್ ಇದ್ದರೆ ಮಾತ್ರ ಒಳ್ಳೆಯ ಕ್ರೆಡಿಟ್ ಸ್ಕೋರ್ ಹೊಂದಬಹುದಾಗಿದೆ. ಹಾಗಾದರೆ, ಕ್ರೆಡಿಟ್ ಕಾರ್ಡ್ ಇಲ್ಲದೆ ಹೇಗೆ ಒಳ್ಳೆಯ ಕ್ರೆಡಿಟ್ ಸ್ಕೋರ್ ಹೊಂದಬಹುದು? ಇಲ್ಲಿದೆ ಮಾಹಿತಿ.
- ಸಣ್ಣಪುಟ್ಟ ಸಾಲ ಮಾಡಿ
ಬ್ಯಾಂಕ್ ಗಳಲ್ಲಿ ಆಗಾಗ ಸಣ್ಣಪುಟ್ಟ ಸಾಲಗಳನ್ನು ತೆಗೆದುಕೊಳ್ಳುವ ಮೂಲಕ ಒಳ್ಳೆಯ ಕ್ರೆಡಿಟ್ ಸ್ಕೋರ್ ಮೇಂಟೇನ್ ಮಾಡಬಹುದಾಗಿದೆ. ಉದಾಹರಣೆಗೆ, ಬಜಾಜ್ ಫೈನಾನ್ಸ್ ಸಣ್ಣ ಸಾಲಗಳನ್ನು ನೀಡುತ್ತದೆ. ಇದರ ಬಡ್ಡಿ ದರಗಳು ಶೇ.10 ರಿಂದ ಶೇ.31ರವರೆಗೆ ಇರುತ್ತದೆ. ಬಡ್ಡಿ ದರಗಳು ನಿಮ್ಮ ಕ್ರೆಡಿಟ್ ಸ್ಕೋರ್, ಮಾಸಿಕ ಆದಾಯ, ಉದ್ಯೋಗ ಇತ್ಯಾದಿ ಅಂಶಗಳ ಮೇಲೆ ಅವಲಂಬಿತವಾಗಿರುತ್ತದೆ.
ಸಮಯಕ್ಕೆ ಸರಿಯಾಗಿ ಸಾಲ ಮರುಪಾವತಿ ಮಾಡಿದರೆ, ನಿಮ್ಮ ಹಣಕಾಸು ನಿರ್ವಹಣೆ ಉತ್ತಮವಾಗಿದೆ ಎಂದು ತೋರಿಸುತ್ತದೆ. ಇದು ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ಹೆಚ್ಚಿಸುತ್ತದೆ.
- ಸರಿಯಾದ ಸಮಯಕ್ಕೆ ಬಿಲ್ ಪಾವತಿ
ಸರಿಯಾದ ಸಮಯಕ್ಕೆ ಮನೆಯ ಬಾಡಿಗೆ ಮತ್ತು ಯುಟಿಲಿಟಿ ಬಿಲ್ಗಳನ್ನು ಪಾವತಿಸುವುದು ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ಉತ್ತಮ ದಿಕ್ಕಿನಲ್ಲಿ ಕೊಂಡೊಯ್ಯುತ್ತದೆ. ಇದು ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ಕಡಿಮೆ ಮಾಡದಂತೆ ರಕ್ಷಿಸುತ್ತದೆ. ಸಾಮಾನ್ಯವಾಗಿ ಯುಟಿಲಿಟಿ ಬಿಲ್ಗಳು ಕ್ರೆಡಿಟ್ ಬ್ಯೂರೋಗಳಿಗೆ ಹೋಗುವುದಿಲ್ಲ. ಆದರೆ, ಬಾಡಿಗೆ ಪಾವತಿಗಳನ್ನು ವರದಿ ಮಾಡುವ ವೆಬ್ ಸೈಟ್ಗಳನ್ನು ಬಳಸಿಕೊಂಡು ನೀವು ಪ್ರಯೋಜನ ಪಡೆಯಬಹುದು. ಈ ವೆಬ್ ಸೈಟ್ಗಳು ನಿಮ್ಮ ಬಾಡಿಗೆ ಪಾವತಿಯನ್ನು ಪರಿಶೀಲಿಸಿ ಕ್ರೆಡಿಟ್ ಬ್ಯೂರೋಗಳಿಗೆ ವರದಿ ಮಾಡುತ್ತವೆ. ಇದರಿಂದ ನಿಮ್ಮ ಕ್ರೆಡಿಟ್ ರಿಪೋರ್ಟ್ ಉತ್ತಮವಾಗುತ್ತದೆ. - ಸ್ಟೇಬಲ್ ಆದ ಉದ್ಯೋಗ ಇತಿಹಾಸ
ಉತ್ತಮ ಕ್ರೆಡಿಟ್ ಹಿಸ್ಟರಿ ನಿರ್ಮಿಸಲು ಸ್ಥಿರವಾದ ಉದ್ಯೋಗವೂ ಒಂದು ಅವಶ್ಯಕತೆಯಾಗಿದೆ. ಸಾಲ ನೀಡುವವರು ವ್ಯಕ್ತಿಯ ಕ್ರೆಡಿಟ್ ಅರ್ಹತೆಯ ಬಗ್ಗೆ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಉದ್ಯೋಗದ ಇತಿಹಾಸ ಮತ್ತು ಅವಧಿಯನ್ನು ಪರಿಗಣಿಸುತ್ತಾರೆ. ಏಕೆಂದರೆ ಇದು ಹಣಕಾಸಿನಲ್ಲಿ ಒಬ್ಬರ ಸ್ಥಿರತೆ, ಪ್ರಬುದ್ಧತೆ ಮತ್ತು ಸಾಲವನ್ನು ಮರುಪಾವತಿ ಮಾಡುವ ಸಾಮರ್ಥ್ಯವನ್ನು ಪ್ರತಿಬಿಂಬಿಸುತ್ತದೆ. ಇದರಿಂದಲೂ ಒಳ್ಳೆಯ ಕ್ರೆಡಿಟ್ ಸ್ಕೋರ್ ಮೇಂಟೇನ್ ಮಾಡಬಹುದಾಗಿದೆ.