ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ರಾಂಬನ್ ಜಿಲ್ಲೆಯ ಚೆನಾಬ್ ನದಿ ಸಮೀಪದ ಧರಮ್ಕುಂಡ್ ಗ್ರಾಮದಲ್ಲಿ ಶನಿವಾರ ರಾತ್ರಿಯಿಡೀ ಸುರಿದ ಭಾರಿ ಮಳೆಯಿಂದಾಗಿ ದಿಢೀರ್ ಪ್ರವಾಹ ಉಂಟಾಗಿದೆ(J&K flash floods). ಘಟನೆಯಲ್ಲಿ ಮೂವರು ಮೃತಪಟ್ಟಿದ್ದು, ಒಬ್ಬರು ಕಾಣೆಯಾಗಿದ್ದಾರೆ. ಭೂಕುಸಿತ, ಆಲಿಕಲ್ಲು ಮತ್ತು ಭಾರೀ ಬಿರುಗಾಳಿಯೊಂದಿಗೆ ಸುರಿದ ಧಾರಾಕಾರ ಮಳೆ ಹಾಗೂ ಪ್ರವಾಹದಿಂದ ಅಪಾರ ಆಸ್ತಿ ಪಾಸ್ತಿ ಹಾನಿಯಾಗಿದೆ. ಅನೇಕ ಮೂಲಸೌಕರ್ಯಗಳಿಗೂ ಹಾನಿ ಉಂಟಾಗಿದೆ. ಹಲವು ಪ್ರದೇಶಗಳಲ್ಲಿ ರಾಷ್ಟ್ರೀಯ ಹೆದ್ದಾರಿಗಳು ಬ್ಲಾಕ್ ಆಗಿವೆ.
ನಿರಂತರ ಮಳೆಯಿಂದಾಗಿ ಹತ್ತಿರದ ನಾಲಾದಲ್ಲಿನ ನೀರಿನ ಮಟ್ಟವು ಏಕಾಏಕಿ ಏರಿಕೆಯಾಗಿದ್ದು, ಪರಿಣಾಮವೆಂಬಂತೆ ಚೆನಾಬ್ ಸೇತುವೆಯ ಬಳಿಯ ಧರಮ್ಕುಂಡ್ ಗ್ರಾಮದಲ್ಲಿ ಪ್ರವಾಹ ಏರ್ಪಟ್ಟಿತು. 10 ಮನೆಗಳು ಸಂಪೂರ್ಣವಾಗಿ ನಾಶವಾಗಿದ್ದು, 25ರಿಂದ 30 ಮನೆಗಳಿಗೆ ಭಾಗಶಃ ಹಾನಿಯಾಗಿದೆ.

ಧರಮ್ಕುಂಡ್ ಪೊಲೀಸರು ಮತ್ತು ಜಿಲ್ಲಾಡಳಿತವು ತ್ವರಿತ ಕಾರ್ಯಾಚರಣೆ ನಡೆಸಿ, ಪ್ರವಾಹಪೀಡಿತ ಪ್ರದೇಶದಲ್ಲಿ ಸಿಲುಕಿದ್ದ ಸುಮಾರು 90 ರಿಂದ 100 ಜನರನ್ನು ಸುರಕ್ಷಿತವಾಗಿ ಸ್ಥಳಾಂತರಿಸಿದೆ.
ಭಾರೀ ಮಳೆಯಿಂದಾಗಿ ಬಾಗ್ನಾ ಗ್ರಾಮದಲ್ಲಿ ಮನೆ ಕುಸಿದ ಪರಿಣಾಮ ಇಬ್ಬರು ಮಕ್ಕಳು ಸೇರಿದಂತೆ ಮೂವರು ಸಾವನ್ನಪ್ಪಿದ್ದಾರೆ ಎಂದು ರಾಂಬನ್ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್ಎಸ್ಪಿ) ಕುಲಬೀರ್ ಸಿಂಗ್ ಖಚಿತಪಡಿಸಿದ್ದಾರೆ.
ಮೃತರನ್ನು ಬಾಗ್ನಾ ಪಂಚಾಯತ್ ನಿವಾಸಿಗಳಾದ ಮೊಹಮ್ಮದ್ ಅಕೀಬ್ (14), ಮೊಹಮ್ಮದ್ ಸಾಕಿಬ್ (9) ಮತ್ತು ಮೋಹನ್ ಸಿಂಗ್ (75) ಎಂದು ಗುರುತಿಸಲಾಗಿದೆ. ಈವರೆಗೆ 100ಕ್ಕೂ ಹೆಚ್ಚು ಜನರನ್ನು ರಕ್ಷಿಸಿ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಸಿಂಗ್ ಹೇಳಿದ್ದಾರೆ.
ಜಿಲ್ಲೆಯಾದ್ಯಂತ ಎರಡು ಹೋಟೆಲ್ ಗಳು, ಹಲವಾರು ಅಂಗಡಿಗಳು ಮತ್ತು ಅನೇಕ ವಸತಿ ಕಟ್ಟಡಗಳಿಗೆ ಹಾನಿಯಾಗಿದೆ. ಮನೆಗಳು, ಕುಸಿದ ಕಟ್ಟಡಗಳು ಮತ್ತು ಅವಶೇಷಗಳ ಅಡಿಯಲ್ಲಿ ವಾಹನಗಳು ಹೂತುಹೋಗಿರುವುದು, ಕೆಸರು-ಮಣ್ಣು ತುಂಬಿದ ನೀರಿನ ಹರಿವಿನ ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ನೀರಿನ ಮಟ್ಟ ಏರುತ್ತಲೇ ಇರುವುದರಿಂದ ಮಹಿಳೆಯರು ಮತ್ತು ಮಕ್ಕಳನ್ನು ಸುರಕ್ಷಿತ ಪ್ರದೇಶಗಳಿಗೆ ಕರೆದೊಯ್ಯುತ್ತಿರುವ ವಿಡಿಯೋಗಳೂ ವೈರಲ್ ಆಗಿವೆ.
ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು ರಾಂಬನ್ ನಲ್ಲಿ ಸಂಭವಿಸಿದ ಭೀಕರ ಭೂಕುಸಿತ ಮತ್ತು ಪ್ರವಾಹದ ಬಗ್ಗೆ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. ಸಂತ್ರಸ್ತ ಕುಟುಂಬಗಳಿಗೆ ಸಂತಾಪ ಸೂಚಿಸಿರುವ ಅವರು, ತ್ವರಿತ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳನ್ನು ನಡೆಸುವ ನಿಟ್ಟಿನಲ್ಲಿ ಸ್ಥಳೀಯ ಅಧಿಕಾರಿಗಳೊಂದಿಗೆ ನಿರಂತರ ಸಮನ್ವಯ ಸಾಧಿಸುತ್ತಿರುವುದಾಗಿ ತಿಳಿಸಿದ್ದಾರೆ.
ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರೂ ಪ್ರತಿಕ್ರಿಯಿಸಿ, ಜಿಲ್ಲಾಡಳಿತದ ತ್ವರಿತ ಕ್ರಮವನ್ನು ಶ್ಲಾಘಿಸಿದ್ದಾರೆ. “ರಾಂಬನ್ ಪ್ರದೇಶದಲ್ಲಿ ರಾತ್ರಿಯಿಡೀ ಭಾರಿ ಆಲಿಕಲ್ಲು ಮಳೆ, ಭೂಕುಸಿತಗಳು ಮತ್ತು ಭಾರೀ ಗಾಳಿ, ಪ್ರವಾಹ ಸ್ಥಿತಿ ಇದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರವನ್ನೂ ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ, ದುರದೃಷ್ಟವಶಾತ್, ಮೂರು ಸಾವುನೋವುಗಳು ಸಂಭವಿಸಿವೆ. ಹಲವಾರು ಕುಟುಂಬಗಳಿಗೆ ಆಸ್ತಿಪಾಸ್ತಿ ನಷ್ಟವಾಗಿದೆ” ಎಂದು ಅವರು ಹೇಳಿದ್ದಾರೆ.
ಜಿಲ್ಲಾಧಿಕಾರಿ ಬಸೀರ್-ಉಲ್-ಹಕ್ ಚೌಧರಿ ಅವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇನೆ ಮತ್ತು ಎಲ್ಲ ರೀತಿಯ ಆರ್ಥಿಕ ನೆರವು ಮತ್ತು ಇತರ ಬೆಂಬಲವನ್ನು ನೀಡಲಾಗುತ್ತದೆ ಎಂದು ಸಿಂಗ್ ಭರವಸೆ ನೀಡಿದ್ದಾರೆ. “ಭಯಭೀತರಾಗಬೇಡಿ – ನಾವೆಲ್ಲರೂ ಒಟ್ಟಾಗಿ ಈ ನೈಸರ್ಗಿಕ ವಿಪತ್ತನ್ನು ಜಯಿಸೋಣ” ಎಂದೂ ಅವರು ಹೇಳಿದ್ದಾರೆ.



















