ಡಬಲ್ ಮರ್ಡರ್ ಹಾಗೂ ಅತ್ಯಾತಾರ ಪ್ರಕರಣದಲ್ಲಿ ಜೈಲು ಸೇರಿದ್ದ ವ್ಯಕ್ತಿಯನ್ನು ನಟ ದುನಿಯಾ ವಿಜಯ್ ಹಣ ಕೊಟ್ಟು ಹೊರ ತಂದಿದ್ದರು. ಈಗ ಅದೇ ವ್ಯಕ್ತಿ ಮತ್ತೆ ಡಬಲ್ ಮರ್ಡರ್ ಮಾಡಿ, ಅರೆಸ್ಟ್ ಆಗಿದ್ದಾನೆ.
ಸುರೇಶ್ ಎಂಬ ವ್ಯಕ್ತಿ ಡಬಲ್ ಮರ್ಡರ್ ಕೇಸ್ ನಲ್ಲಿ ಅರೆಸ್ಟ್ ಆಗಿದ್ದಾನೆ. ಸುರೇಶ್ ಕೊಲೆ ಹಾಗೂ ಅತ್ಯಾಚಾರ ಪ್ರಕರಣದಲ್ಲಿ ಜೈಲು ಪಾಲಾಗಿ, 10 ವರ್ಷ ಶಿಕ್ಷೆ ಅನುಭವಿಸಿದ್ದ. ಆದರೆ, ಇತ್ತೀಚೆಗೆ ಬೆಂಗಳೂರಿನ ಹೊರವಲಯದಲ್ಲಿ ನಡೆದಿದ್ದ ಡಬಲ್ ಮರ್ಡರ್ ಕೇಸ್ ನಲ್ಲಿ ಅರೆಸ್ಟ್ ಆಗಿದ್ದಾನೆ.
ಹಿಂದೆ ಸುರೇಶ್ ಗೆ ಶ್ಯೂರಿಟಿ ಹಣ ನೀಡಿ ಹೊರಕ್ಕೆ ಕರೆತರಲು ಯಾರೂ ಮುಂದೆ ಬಂದಿರಲಿಲ್ಲ. ಆಗ ಒಂದಿಷ್ಟು ಅಪರಾಧಿಗಳಿಗೆ ತಲಾ ಮೂರು ಲಕ್ಷದಂತೆ ದುನಿಯಾ ವಿಜಯ್ ಶ್ಯೂರಿಟಿ ಹಣ ನೀಡಿದ್ದರು. ಆಗ ಸುರೇಶ್ ಗೂ ಮೂರು ಲಕ್ಷ ರೂ. ಶ್ಯೂರಿಟಿ ನೀಡಿದ್ದರು. ಹೀಗಾಗಿ ಸುರೇಶ್ ಜೈಲಿನಿಂದ ಹೊರ ಬಂದಿದ್ದ.
ಆದರೆ, ಜೈಲಿನಿಂದ ಹೊರ ಬಂದ ಬಳಿಕ ಸುರೇಶ್ ಬದಲಾಗಿದ್ದ. ಮಾರ್ಕೆಟ್ ನಲ್ಲಿ ಕೊತ್ತುಂಬರಿ ಸೊಪ್ಪು ಮಾರಾಟ ಮಾಡಿ ಬದುಕು ಸಾಗಿಸುತ್ತಿದ್ದ. ಆನಂತರ ಖಾಸಗಿ ಬಸ್ ಸರ್ವಿಸ್ ನಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದ.
ಇತ್ತೀಚೆಗೆ ನಗರದ ಹೊರವಲಯದಲ್ಲಿ ಜೋಡಿ ಕೊಲೆ ನಡೆದಿತ್ತು. ಎಸ್ ಆರ್ ಎಸ್ ಟ್ರಾವೆಲ್ಸ್ ಬಸ್ ನಲ್ಲಿ ಕೆಲಸ ಮಾಡುತ್ತಿದ್ದ ನಾಗೇಶ್ (51) ಮತ್ತು ಮಂಜುನಾಥ್ (50) ಕೊಲೆಯಾಗಿದ್ದರು. ನಾಗೇಶ್ ಮತ್ತು ಮಂಜುನಾಥ್, ‘ನೀನು ಕಳ್ಳ, ಕೊಲೆಗಾರ’ ಎಂದು ಸುರೇಶ್ಗೆ ಹೀಯಾಳಿಸಿದ್ದರು ಎನ್ನಲಾಗಿದೆ. ಇದರಿಂದ ಸಿಟ್ಟಾಗಿ ಸುರೇಶ್ ಕೊಲೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ. ಸದ್ಯ ಆರೋಪಿಯನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.