ಶಿವಮೊಗ್ಗ: ಸರ್ಕಾರ ಕೂಡಲೇ ಸಾವನ್ನಪ್ಪಿರುವ ಬಾಣಂತಿಯರ ಕುಟುಂಬಗಳಿಗೆ ತಲಾ 25 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆಗ್ರಹಿಸಿದ್ದಾರೆ.
ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಬಾಣಂತಿಯರ ಸಾವು ಸರಣಿ ಎಂಬಂತೆ ನಡೆಯುತ್ತಿದೆ. ಆದರೂ ಸರ್ಕಾರ ಮೌನ ವಹಿಸಿ ಕುಳಿತಿದೆ. ಹೀಗಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಬಾಣಂತಿಯರ ಸಾವಿನಿಂದಾಗಿ ಅನಾಥವಾಗಿರುವ ಮಕ್ಕಳನ್ನು ರಾಜ್ಯ ಸರ್ಕಾರವೇ ದತ್ತು ತೆಗೆದುಕೊಳ್ಳಬೇಕು. ಈ ಮಹಾನ್ ಕಾರ್ಯ ಮಾಡಿದರೆ ಮಾತ್ರ ಭಗವಂತ ಈ ಸರ್ಕಾರವನ್ನು ಕ್ಷಮಿಸುತ್ತಾನೆ. ಇಲ್ಲವಾದರೆ, ಈ ಸರ್ಕಾರ ನಾಶವಾಗುತ್ತದೆ ಎಂದು ಶಾಪ ಹಾಕಿದ್ದಾರೆ.
ಈ ದುಷ್ಟ ಸರ್ಕಾರ ಅಮಲಿನಲ್ಲಿ ತೇಲುತ್ತಿದೆ. ಭ್ರಷ್ಟಾಚಾರದ ವಿರುದ್ಧ ಬಿಜೆಪಿ ನಿರಂತರ ಹೋರಾಟ ಮಾಡುತ್ತಿದೆ. ಈ ಲಜ್ಜೆಗೆಟ್ಟ ಸರ್ಕಾರಕ್ಕೆ ಬಿಜೆಪಿ ಹೋರಾಟದ ಮೂಲಕ ತಕ್ಕ ಪಾಠ ಕಲಿಸಿ ಸರಿ ದಾರಿಗೆ ತರುವ ಕೆಲಸ ಮಾಡುತ್ತಿದೆ ಎಂದು ಕಿಡಿಕಾರಿದ್ದಾರೆ.