ಮುಂಬಯಿ: ಬಾಲಿವುಡ್ ನಟ ಸಲ್ಮಾನ್ ಖಾನ್ ಹತ್ಯೆಗೆ 25 ಲಕ್ಷ ರೂ. ಹಣಕ್ಕೆ ಡೀಲ್ ಕೊಡಲಾಗಿತ್ತು ಎಂಬ ಸಂಗತಿ ಬಯಲಾಗಿದೆ.
ಮಹಾರಾಷ್ಟ್ರದ ಪನ್ವೇಲ್ ನಲ್ಲಿ ಇರುವ ಫಾರ್ಮ್ ಹೌಸ್ ನಲ್ಲಿ ಸಲ್ಮಾನ್ ಖಾನ್ ಹತ್ಯೆ ಮಾಡಲು ಸಂಚು ರೂಪಿಸಲಾಗಿತ್ತು ಎಂದು ನವಿ ಮುಂಬಯಿ ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿರುವ ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಿದ್ದಾರೆ.
ಅಲ್ಲದೇ, ಚಾರ್ಜ್ ಶೀಟ್‌ನಲ್ಲಿ ಐವರ ಹೆಸರನ್ನು ಉಲ್ಲೇಖಿಸಲಾಗಿದೆ. ಜೈಲಿನಲ್ಲಿ ಇರುವ ಗ್ಯಾಂಗ್ ಸ್ಟರ್ ಲಾರೆನ್ಸ್ ಬಿಷ್ಣೋಯಿ ಸಾರಥ್ಯದ ತಂಡದಿಂದ ಈ ಸುಪಾರಿ ಪಡೆಯಲಾಗಿತ್ತು. ಸಲ್ಮಾನ್ ಖಾನ್ ಹತ್ಯೆಗೆ ಸಂಚು ರೂಪಿಸಿದ್ದ ತಂಡ ಇದಕ್ಕಾಗಿ ಪಾಕಿಸ್ತಾನದಿಂದ ಎಕೆ 47, ಎಕೆ 92 ರೈಫಲ್‌ಗಳನ್ನ ತರಿಸಿಕೊಳ್ಳಲು ಮುಂದಾಗಿತ್ತು. ಪಂಜಾಬಿ ಗಾಯಕ ಸಿಧು ಮೂಸೆವಾಲಾ ಹತ್ಯೆಗೆ ಬಳಕೆಯಾಗಿದ್ದ ಟರ್ಕಿ ನಿರ್ಮಿತ ಝಿಗಾನಾ ರೈಫಲ್‌ಗಳನ್ನೂ ಬಳಸಿಕೊಳ್ಳಲು ತೀರ್ಮಾನಿಸಿದ್ದರು ಎಂಬ ಸಂಗತಿಯನ್ನು ಪೊಲೀಸರು ಬಯಲು ಮಾಡಿದ್ದಾರೆ.
18 ವರ್ಷ ಒಳಗಿನ ಬಾಲಕರನ್ನು ಈ ಕೃತ್ಯ ಎಸಗಲು ನಿಯೋಜನೆ ಮಾಡಿಕೊಂಡಿದ್ದರು. ಈ ಆರೋಪಿಗಳು ಮಹಾರಾಷ್ಟ್ರದ ಪುಣೆ, ರಾಯಘಡ, ನವಿ ಮುಂಬೈ, ಥಾಣೆ ಹಾಗೂ ಗುಜರಾತ್ ರಾಜ್ಯಗಳಲ್ಲಿ ಕೆಲ ಕಾಲ ಅಡಗಿದ್ದರು. ಅಲ್ಲಿಯೇ ಸಂಚು ರೂಪಿಸುತ್ತಿದ್ದರು ಎಂದು ಚಾರ್ಜ್ ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ.
ಸುಮಾರು 60 ರಿಂದ 70 ಮಂದಿ ಸಲ್ಮಾನ್ ಖಾನ್ ಅವರ ಮೇಲೆ ನಿಗಾ ವಹಿಸಿದ್ದರು. ಸಲ್ಮಾನ್ ವಾಸಿಸುವ ಬಾಂದ್ರಾ ಮನೆ, ಪನ್ವೇಲ್‌ನ ಫಾರ್ಮ್ ಹೌಸ್ ಹಾಗೂ ಗೋರೆಗಾಂವ್ ಫಿಲ್ಮ್ ಸಿಟಿಗಳಲ್ಲಿ ನಟನ ಮೇಲೆ ನಿಗಾ ವಹಿಸಲಾಗಿತ್ತು. 2023ರ ಆಗಸ್ಟ್‌ನಿಂದ 2024ರ ಏಪ್ರಿಲ್ ಒಳಗೆ ಸಲ್ಮಾನ್ ಖಾನ್ ಹತ್ಯೆಗೆ ಸಂಚು ರೂಪಿಸಲಾಗಿತ್ತು ಎಂಬುವುದನ್ನು ಪೊಲೀಸರು ಬಯಲು ಮಾಡಿದ್ದಾರೆ.