ರಾಯಚೂರು: ಭಕ್ತರ ಸೋಗಿನಲ್ಲಿ ಬಂದಿದ್ದ ದುಷ್ಕರ್ಮಿಗಳು ಚಿತ್ತರಗಿ ವಿಜಯ ಮಹಾಂತೇಶ್ವರ ಶಾಖಾ ಮಠದ (Mahanteshwar Math) ಪೀಠಾಧಿಪತಿಗೆ ಹೆದರಿಸಿ ಚಿನ್ನಾಭರಣ, ನಗದು ಸೇರಿದಂತೆ ಸುಮಾರು 35 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ದರೋಡೆ ಮಾಡಿ ಪರಾರಿಯಾಗಿರುವ ಘಟನೆ ನಡೆದಿದೆ.
ಲಿಂಗಸುಗೂರಿನ ಬಸವಸಾಗರ ರಸ್ತೆಯಲ್ಲಿರುವ ಮಠದ ಸಿದ್ಧಲಿಂಗ ಸ್ವಾಮೀಜಿಗಳಿಗೆ ಹೆದರಿಸಿದ ದುಷ್ಕ್ರಮಿಗಳು 20 ರಿಂದ 25 ಲಕ್ಷ ರೂ. ನಗದು, 80 ಗ್ರಾಂ ಚಿನ್ನಾಭರಣ, 7 ಕೆ.ಜಿ ಬೆಳ್ಳಿ ವಸ್ತುಗಳನ್ನು ದೋಚಿ ಪರಾರಿಯಾಗಿದ್ದಾರೆ.

ಭಕ್ತರ ಸೋಗಿನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು, ಕಲಬುರಗಿಯಿಂದ ಬಂದಿದ್ದೇವೆ. ರಾತ್ರಿ ಮಠದಲ್ಲಿ ಆಶ್ರಯ ನೀಡಿ ಎಂದು ಹೇಳಿದ್ದಾರೆ. ನಂತರ ನೀರು ಕೇಳುವ ನೆಪದಲ್ಲಿ ನಡುರಾತ್ರಿ ಸ್ವಾಮಿಜಿ ಕೋಣೆ ಬಾಗಿಲು ತೆಗೆಸಿ ಸುಲಿಗೆ ಮಾಡಿದ್ದಾರೆ. ಪಿಸ್ತೂಲ್ ರೀತಿಯ ಆಯುಧ ಹಿಡಿದು ಬೆದರಿಸಿ ಸುಲಿಗೆ ಮಾಡಿದ್ದಾರೆ ಎಂದು ಸ್ವಾಮೀಜಿ ಆರೋಪಿಸಿದ್ದಾರೆ.
ಈ ಕುರಿತು ಲಿಂಗಸುಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
