ಸುಕ್ಮಾ: 2026ರೊಳಗೆ ದೇಶವನ್ನು ನಕ್ಸಲ್ ಮುಕ್ತವಾಗಿಸಲು ಕೇಂದ್ರ ಸರ್ಕಾರ ಪಣ ತೊಟ್ಟಿರುವಂತೆಯೇ ಛತ್ತೀಸ್‌ಗಢದ ಸುಕ್ಮಾ ಜಿಲ್ಲೆಯಲ್ಲಿ ಶುಕ್ರವಾರ ಕನಿಷ್ಠ 22 ಮಾವೋವಾದಿಗಳು ಭದ್ರತಾ ಪಡೆಗಳ ಮುಂದೆ ಶರಣಾಗಿದ್ದಾರೆ(Naxal Surrender). ಈ ಪೈಕಿ 12 ಮಂದಿ ಒಟ್ಟು 40.5 ಲಕ್ಷ ರೂ.ಗಳ ಬಹುಮಾನವನ್ನು ಹೊತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
“ಟೊಳ್ಳು” ಮತ್ತು “ಅಮಾನವೀಯ” ಮಾವೋವಾದಿ ಸಿದ್ಧಾಂತಗಳಿಂದ ಮತ್ತು ಸ್ಥಳೀಯ ಬುಡಕಟ್ಟು ಜನರ ಮೇಲೆ ಆಗುತ್ತಿರುವ ದೌರ್ಜನ್ಯಗಳಿಂದ ಹತಾಶರಾಗಿ 9 ಮಹಿಳಾ ನಕ್ಸಲರು ಸೇರಿದಂತೆ ಒಟ್ಟು 22 ಮಂದಿ ಮುಖ್ಯವಾಹಿನಿಗೆ ಬರಲು ನಿರ್ಧರಿಸಿದ್ದಾರೆ. ಅವರೆಲ್ಲರೂ ಪೊಲೀಸ್ ಮತ್ತು ಕೇಂದ್ರ ಮೀಸಲು ಪೊಲೀಸ್ ಪಡೆಗಳ (ಸಿಆರ್‌ಪಿಎಫ್) ಹಿರಿಯ ಅಧಿಕಾರಿಗಳ ಮುಂದೆ ಶರಣಾಗಿದ್ದಾರೆ ಎಂದು ಸುಕ್ಮಾ ಪೊಲೀಸ್ ವರಿಷ್ಠಾಧಿಕಾರಿ ಕಿರಣ್ ಚವಾಣ್ ತಿಳಿಸಿದ್ದಾರೆ.
ಅಲ್ಲದೇ, ಕುಗ್ರಾಮಗಳನ್ನು ಅಭಿವೃದ್ಧಿಪಡಿಸುವ ಗುರಿ ಹೊಂದಿರುವ ಛತ್ತೀಸ್‌ಗಢ ಸರ್ಕಾರದ ‘ನಿಯಾದ್ ನೆಲ್ಲನಾರ್’ (ನಿಮ್ಮ ಉತ್ತಮ ಗ್ರಾಮ) ಯೋಜನೆ ಮತ್ತು ಹೊಸ ಶರಣಾಗತಿ ಮತ್ತು ಪುನರ್ವಸತಿ ನೀತಿಯಿಂದ ಪ್ರಭಾವಿತರಾಗಿ ಶರಣಾಗತಿ ನಿರ್ಧಾರ ಕೈಗೊಂಡಿರುವುದಾಗಿ ನಕ್ಸಲರು ತಿಳಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಶರಣಾದ ನಕ್ಸಲರೆಲ್ಲರೂ ಮಾಡ್ (ಛತ್ತೀಸ್ ಗಢ) ಮತ್ತು ನುವಾಪಾಡಾ (ಒಡಿಶಾ) ವಿಭಾಗಗಳಲ್ಲಿ ಸಕ್ರಿಯರಾಗಿದ್ದವರು ಎಂದು ತಿಳಿದುಬಂದಿದೆ. ಶರಣಾಗತರಾದ ನಕ್ಸಲರಲ್ಲಿ ಮಾಡ್ ವಿಭಾಗದ ಪಿಎಲ್‌ಜಿಎ (ಪೀಪಲ್ಸ್ ಲಿಬರೇಶನ್ ಗೆರಿಲ್ಲಾ ಆರ್ಮಿ) ಕಂಪನಿ ಸಂಖ್ಯೆ 1ರ ಉಪ ಕಮಾಂಡರ್ ಮುಚಕಿ ಜೋಗಾ (33) ಮತ್ತು ಅದೇ ತಂಡದ ಸದಸ್ಯೆ, ಅವರ ಪತ್ನಿ ಮುಚಕಿ ಜೋಗಿ (28) ಕೂಡ ಸೇರಿದ್ದಾರೆ ಎಂದು ಎಸ್ಪಿ ಚವಾಣ್ ತಿಳಿಸಿದ್ದಾರೆ. ಇವರಿಬ್ಬರನ್ನು ಹಿಡಿದುಕೊಟ್ಟರೆ ತಲಾ 8 ಲಕ್ಷ ರೂ. ಬಹುಮಾನ ನೀಡುವುದಾಗಿ ಈ ಹಿಂದೆಯೇ ಸರ್ಕಾರ ಘೋಷಿಸಿತ್ತು.
ಇವರಲ್ಲದೇ, ತಲಾ 5 ಲಕ್ಷ ರೂ. ಬಹುಮಾನ ಹೊತ್ತಿದ್ದ ಮಾವೋವಾದಿಗಳ ಪ್ರದೇಶ ಸಮಿತಿ ಸದಸ್ಯರಾದ ಕಿಕಿದ್ ದೇವೇ(30) ಮತ್ತು ಮನೋಜ್ ಅಲಿಯಾಸ್ ದುಧಿ ಬುಧ್ರಾ (28) ಕೂಡ ಸೇರಿದ್ದಾರೆ. ಶರಣಾಗತರಾದ 7 ನಕ್ಸಲರ ತಲೆಗೆ ತಲಾ 2 ಲಕ್ಷ ರೂ.ಗಳ ಬಹುಮಾನ ಮತ್ತು ಇನ್ನೊಬ್ಬ ಮಾವೋವಾದಿ ತಲೆಗೆ 50,000 ರೂ.ಗಳ ಬಹುಮಾನ ಘೋಷಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇವರೆಲ್ಲರೂ ಭದ್ರತಾ ಪಡೆಗಳ ಮೇಲೆ ನಡೆದಿದ್ದ ಅನೇಕ ದಾಳಿಗಳಲ್ಲಿ ಭಾಗಿಯಾಗಿದ್ದವರು ಎಂದೂ ಅವರು ಮಾಹಿತಿ ನೀಡಿದ್ದಾರೆ. ಜಿಲ್ಲಾ ಪೊಲೀಸರು, ಜಿಲ್ಲಾ ಮೀಸಲು ಪಡೆ(ಡಿಆರ್‌ಜಿ), ಸಿಆರ್‌ಪಿಎಫ್ ಮತ್ತು ಸಿಆರ್‌ಪಿಎಫ್ ಕೋಬ್ರಾ ಪಡೆಯು ನಕ್ಸಲರ ಶರಣಾಗತಿಯಲ್ಲಿ ನಿರ್ಣಾಯಕ ಪಾತ್ರ ವಹಿಸಿವೆ ಎಂದು ಹೇಳಲಾಗಿದೆ.
ಶರಣಾದ ಎಲ್ಲಾ ಮಾವೋವಾದಿಗಳಿಗೆ ತಲಾ 50,000 ರೂ.ಗಳ ಆರ್ಥಿಕ ನೆರವು ನೀಡಲಾಗಿದೆ ಮತ್ತು ಸರ್ಕಾರದ ನೀತಿಯ ಪ್ರಕಾರ ಅವರಿಗೆ ಹೆಚ್ಚಿನ ಪುನರ್ವಸತಿ ಕಲ್ಪಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ ವರ್ಷ ಸುಕ್ಮಾ ಸೇರಿದಂತೆ ಏಳು ಜಿಲ್ಲೆಗಳನ್ನು ಒಳಗೊಂಡ ಬಸ್ತಾರ್ ಪ್ರದೇಶದಲ್ಲಿ ಒಟ್ಟಾರೆ 792 ಮಾವೋವಾದಿಗಳು ಶರಣಾಗಿದ್ದರು.



















