ಬ್ಯಾಂಕಾಕ್: ಥೈಲ್ಯಾಂಡ್‌ನಲ್ಲಿ ಇಂದು ಬೆಳಗ್ಗೆ ಸಂಭವಿಸಿದ ಭೀಕರ ರೈಲು ಅಪಘಾತವೊಂದರಲ್ಲಿ ಕನಿಷ್ಠ 22 ಜನರು ದಾರುಣವಾಗಿ ಸಾವನ್ನಪ್ಪಿದ್ದು, 30ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ. ಹೈಸ್ಪೀಡ್ ರೈಲು ಕಾಮಗಾರಿಗಾಗಿ ಬಳಸಲಾಗುತ್ತಿದ್ದ ಬೃಹತ್ ಕ್ರೇನ್‌ವೊಂದು ಚಲಿಸುತ್ತಿದ್ದ ರೈಲಿನ ಮೇಲೆ ಕುಸಿದುಬಿದ್ದ ಪರಿಣಾಮ ಈ ದುರಂತ ಸಂಭವಿಸಿದೆ.

ಥೈಲ್ಯಾಂಡ್‌ನ ರಾಜಧಾನಿ ಬ್ಯಾಂಕಾಕ್‌ನಿಂದ ಈಶಾನ್ಯ ಭಾಗದ ಉಬೊನ್ ರಾಟ್ಚಥಾನಿ (Ubon Ratchathani) ಪ್ರಾಂತ್ಯಕ್ಕೆ ರೈಲು ಪ್ರಯಾಣಿಸುತ್ತಿತ್ತು. ಬ್ಯಾಂಕಾಕ್‌ನಿಂದ ಸುಮಾರು 230 ಕಿಲೋಮೀಟರ್ ದೂರದಲ್ಲಿರುವ ನಖೋನ್ ರಾಟ್ಚಸಿಮಾ ಪ್ರಾಂತ್ಯದ ಸಿಖಿಯೊ ಜಿಲ್ಲೆಯಲ್ಲಿ ರೈಲು ಸಾಗುತ್ತಿದ್ದಾಗ ಈ ಅವಘಡ ನಡೆದಿದೆ.
ರೈಲು ಹಳಿಗಳ ಪಕ್ಕದಲ್ಲಿ ಹೈಸ್ಪೀಡ್ ರೈಲ್ವೆ ಯೋಜನೆಯ ಕಾಮಗಾರಿ ನಡೆಯುತ್ತಿತ್ತು. ಈ ವೇಳೆ ಕಾರ್ಯನಿರತವಾಗಿದ್ದ ನಿರ್ಮಾಣ ಹಂತದ ಕ್ರೇನ್ ಹಠಾತ್ತನೆ ಕುಸಿದು, ವೇಗವಾಗಿ ಸಾಗುತ್ತಿದ್ದ ಪ್ಯಾಸೆಂಜರ್ ರೈಲಿನ ಮೇಲೆ ಅಪ್ಪಳಿಸಿದೆ.
ಹಳಿ ತಪ್ಪಿ ಹೊತ್ತಿಕೊಂಡ ಬೆಂಕಿ:
ಕ್ರೇನ್ ಬಿದ್ದ ರಭಸಕ್ಕೆ ರೈಲು ಹಳಿ ತಪ್ಪಿದೆ. ಅಷ್ಟೇ ಅಲ್ಲದೆ, ಡಿಕ್ಕಿಯ ತೀವ್ರತೆಗೆ ಬೋಗಿಗಳಿಗೆ ಬೆಂಕಿ ಹೊತ್ತಿಕೊಂಡಿದೆ ಎಂದು ರಾಯಿಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ. ಅಪಘಾತದ ತೀವ್ರತೆ ಹೆಚ್ಚಿದ್ದರಿಂದ ಬೋಗಿಗಳು ನಜ್ಜುಗುಜ್ಜಾಗಿದ್ದು, ಬೆಂಕಿಯ ಜ್ವಾಲೆ ಆವರಿಸಿಕೊಂಡಿದೆ.
ಸ್ಥಳೀಯ ಪೊಲೀಸರು ಮತ್ತು ರಕ್ಷಣಾ ಸಿಬ್ಬಂದಿ ಕೂಡಲೇ ಸ್ಥಳಕ್ಕೆ ದೌಡಾಯಿಸಿದ್ದು, ರಕ್ಷಣಾ ಕಾರ್ಯಾಚರಣೆ ಕೈಗೊಂಡಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗಳಿಗೆ ರವಾನಿಸಲಾಗಿದೆ. ಮೃತರ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : ಮಗಳ ಜನನದ ಮೊದಲು ಯೋಧ ವೀರಮರಣ | ಪತ್ನಿಯ ಕಣ್ಣೀರ ವಿದಾಯ



















