ಬಿಬಿಎಂಪಿ ತ್ಯಾಜ್ಯ ವಿಲೇವಾರಿ ಸಮಸ್ಯೆಗಳ ಪರಿಹಾರಕ್ಕೆಂದು ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ 14 ಮತ್ತು 15ನೇ ಹಣಕಾಸು ಆಯೋಗದ 2,067 ಕೋಟಿ ರೂ. ಅನುದಾನವನ್ನು ಅಧಿಕಾರಿಗಳನ್ನು ತಿಂದು ತೇಗಿದ್ದಾರೆ ಎಂದು ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ಹಾಗೂ ಭ್ರಷ್ಟಾಚಾರ ವಿರೋಧಿ ವೇದಿಕೆಯ ಅಧ್ಯಕ್ಷ ರಮೇಶ್ ಎನ್. ಆರ್ ಆರೋಪಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ಕೇಂದ್ರ ಸರ್ಕಾರವು ರಾಜ್ಯಕ್ಕೆ 2017-18 ರಿಂದ 2023-24ರ ವರೆಗಿನ ಅವಧಿಯಲ್ಲಿ 14 ಮತ್ತು 15ನೇ ಹಣಕಾಸು ಆಯೋಗದಿಂದ ಒಟ್ಟು 2,09,690,29,00,000 ರೂ. ಬಿಡುಗಡೆ ಮಾಡಿತ್ತು. ಅಲ್ಲದೇ, ಮಹಾನಗರ ಪಾಲಿಕೆಯ ತ್ಯಾಜ್ಯ ವಿಲೇವಾರಿ ಕಾರ್ಯದ ಸಮಸ್ಯೆಗಳ ಪರಿಹಾರ ಕಾರ್ಯಗಳಿಗಾಗಿ 2013-14 ರಿಂದ 2023-24 ರ ಅವಧಿಯಲ್ಲಿ 13, 14 ಮತ್ತು 15ನೇ ಹಣಕಾಸು ಆಯೋಗದಿಂದ 2066,94,89,000 ರೂ. ಬಿಡುಗಡೆಯಾಗಿತ್ತು.
ಹೀಗೆ Mechanical Sweeping Machines ಮತ್ತು Compactor ಗಳ ಖರೀದಿ, ವೈಜ್ಞಾನಿಕ ಸಂಸ್ಕರಣಾ ಘಟಕಗಳ ನಿರ್ಮಾಣ, KCDC ಘಟಕದ ಉನ್ನತೀಕರಣ, ಭೂಭರ್ತಿ ಕೇಂದ್ರಗಳ ಅಭಿವೃದ್ಧಿ, ಸಂಸ್ಕರಣಾ ಘಟಕಗಳು ಮತ್ತು ಭೂಭರ್ತಿ ಕೇಂದ್ರಗಳ ಸುತ್ತಮುತ್ತಲಿನ ಗ್ರಾಮಗಳ, ಪ್ರದೇಶಗಳ ಅಭಿವೃದ್ಧಿ, ಮೌಲಸೌಕರ್ಯ ಒದಗಿಸುವುದು ಸೇರಿದಂತೆ ಉಪಕರಣಗಳ ಖರೀದಿಗಾಗಿ ಹತ್ತು ಹಲವು ಹೆಸರುಗಳಲ್ಲಿ ಒಟ್ಟು 2,067 ಕೋಟಿ ರೂ. ಅನುದಾನವನ್ನು ಖರ್ಚು ಮಾಡಲಾಗಿದೆ ಎಂದು ದಾಖಲೆಗಳನ್ನು ಅಧಿಕಾರಿಗಳು ಸಿದ್ಧಪಡಿಸಿದ್ದಾರೆ. ಈ ದಾಖಲೆಗಳೆಲ್ಲ ಖೊಟ್ಟಿ ಹಾಗೂ ಸುಳ್ಳಿನಿಂದ ಕೂಡಿವೆ ಎಂದು ಆರೋಪಿಸಿದ್ದಾರೆ.
ಈ ಅನುದಾನದ ಮೂಲಕ 2016-17 ರಲ್ಲಿ ಪಾಲಿಕೆ ಖರೀದಿಸಿದ್ದ 60ಕ್ಕೂ ಅಧಿಕ Mechanical Sweeper ಗಳು ಮತ್ತು Compactor ಗಳ ಪೈಕಿ ಈಗ ಕೇವಲ ಮೂರ್ನಾಲ್ಕು ವಾಹನಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ. ಇನ್ನುಳಿದ ವಾಹನಗಳು ಏನಾದವು ಎಂಬ ಮಾಹಿತಿಯೇ ಇಲ್ಲ. ತಲಾ 47 ಲಕ್ಷ ರೂ. ಬೆಲೆ ಬಾಳುವ Mechanical Sweeper ಗಳಿಗೆ ತಲಾ 1.3 ಕೋಟಿ ರೂಪಾಯಿಗಳಷ್ಟು ಮೊತ್ತವನ್ನು ನಮೂದಿಸುವ ಮೂಲಕ ಹತ್ತಾರು ಕೋಟಿ ರೂಪಾಯಿಗಳನ್ನು ಗುಳುಂ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.
ಸುಮಾರು 430 ಕೋಟಿ ರೂ. ವ್ಯಯಿಸಿ 2016 ರಲ್ಲಿ ಸುಬ್ಬರಾಯನ ಪಾಳ್ಯ, ಚಿಕ್ಕನಾಗಮಂಗಲ, ಸೀಗೇಹಳ್ಳಿ, ಕನ್ನಳ್ಳಿ, ಲಿಂಗಧೀರನಹಳ್ಳಿ ಮತ್ತು ದೊಡ್ಡ ಬಿದರಕಲ್ಲು ಗ್ರಾಮಗಳಲ್ಲಿ ನಿರ್ಮಿಸಿದ್ದ “ವೈಜ್ಞಾನಿಕ ತ್ಯಾಜ್ಯ ಸಂಸ್ಕರಣಾ ಘಟಕ”ಗಳ ಪೈಕಿ ಮೂರು ಘಟಕಗಳು ಸಂಪೂರ್ಣ ಸ್ಥಗಿತವಾಗಿವೆ. ಇನ್ನೊಂದು ಘಟಕದ ಕಾಮಗಾರಿ ಕುಂಟುತ್ತ ಸಾಗುತ್ತಿದೆ. ಚಿಕ್ಕನಾಗಮಂಗಲ ಮತ್ತು ದೊಡ್ಡ ಬಿದರಕಲ್ಲು ಘಟಕಗಳು ಮಾತ್ರ ಸ್ವಲ್ಪ ಮಟ್ಟಿಗೆ ಕಾರ್ಯ ನಿರ್ವಹಿಸುತ್ತಿವೆ.
ಬಾಗಲೂರು, ಮಿಟ್ಟಗಾನ ಹಳ್ಳಿ ಮತ್ತು ಬೈಯಪ್ಪನ ಹಳ್ಳಿಯಲ್ಲಿರುವ ಭೂಭರ್ತಿ ಕೇಂದ್ರಗಳನ್ನು ಅತ್ಯಂತ ಅವೈಜ್ಞಾನಿಕವಾಗಿ ನಿರ್ವಹಣೆ ಮಾಡಲಾಗುತ್ತಿದೆ. ಆದರೆ, ಈ ಭೂಭರ್ತಿ ಕೇಂದ್ರಗಳ ಅಭಿವೃದ್ಧಿ ಕಾರ್ಯಗಳಿಗೆಂದು ಮತ್ತು ತ್ಯಾಜ್ಯ ದ್ರಾವಣ ಭೂಮಿಯ ಒಡಲನ್ನು ಸೇರದಂತೆ ವೈಜ್ಞಾನಿಕವಾಗಿ ನಿರ್ವಹಣೆ ಮಾಡಲೆಂದು ಪ್ರತಿಯೊಂದು ಭೂಭರ್ತಿ ಕೇಂದ್ರಕ್ಕೆ ನೂರಾರು ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಆದರೆ, ಈ ಪೈಕಿ ಶೇ. 90ರಷ್ಟು ಅನುದಾನ ಲೂಟಿ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.
ಅಲ್ಲದೇ, KCDC ಘಟಕದ ಉನ್ನತೀಕರಣ ಕಾರ್ಯದ ಹೆಸರಿನಲ್ಲಿ ಹತ್ತಾರು ಕೋಟಿ ರೂ. ಲೂಟಿ ಮಾಡಲಾಗಿದೆ. 7 ಸಂಸ್ಕರಣಾ ಘಟಕಗಳು ಮತ್ತು 3 ಭೂಭರ್ತಿ ಕೇಂದ್ರಗಳ ಸುತ್ತಮುತ್ತಲಿನ ಪ್ರದೇಶಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸಲು ನೂರಾರು ಕೋಟಿ ವ್ಯಯಿಸಿರುವ ಸುಳ್ಳು ದಾಖಲೆ ಸೃಷ್ಟಿಸಲಾಗಿದೆ. ಸುಧಾರಿತ ಉಪಕರಣಗಳ ಖರೀದಿಯ ಹೆಸರಿನಲ್ಲಿ ಹತ್ತಾರು ಕೋಟಿ ರೂ. ಲೂಟಿ ಮಾಡಲಾಗಿದೆ. ಅಧಿಕಾರಿಗಳು ಶೇ. 90ರಷ್ಟು ಲೂಟಿ ಮಾಡಿ ಶೇ. 10ರಷ್ಟೂ ಕಾರ್ಯ ನಿರ್ವಹಿಸಿಲ್ಲ ಎಂದು ಗಂಭೀರ ಆರೋಪ ಮಾಡಿದ್ದಾರೆ. ಅಲ್ಲದೇ, ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವ ಅಧಿಕಾರಿಗಳು, ಗುತ್ತಿಗೆದಾರರ ವಿರುದ್ಧ ದೂರು ಜಾರಿ ನಿರ್ದೇಶನಾಲಯದಲ್ಲಿ ದೂರು ದಾಖಲಿಸಲಾಗಿದೆ ಎಂದು ಹೇಳಿದ್ದಾರೆ.