ಬೆಂಗಳೂರು: 2020ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ (Karnataka State Film Awards) ಪಟ್ಟಿ ಪ್ರಕಟಗೊಂಡಿದ್ದು, ‘ಜಂಟಲ್ಮ್ಯಾನ್’ ಸಿನಿಮಾದ ಅಭಿನಯಕ್ಕಾಗಿ ಪ್ರಜ್ವಲ್ ದೇವರಾಜ್ (Prajwal Devaraj)ಗೆ ‘ಅತ್ಯುತ್ತಮ ನಟ’ ಪ್ರಶಸ್ತಿ ಸಂದಿದೆ.
‘ಪಿಂಕಿ ಎಲ್ಲಿ’ ಸಿನಿಮಾದ ಅಭಿನಯಕ್ಕಾಗಿ ಅಕ್ಷತಾ ಪಾಂಡವಪುರ (Akshatha Pandavapura) ‘ಅತ್ಯುತ್ತಮ ನಟಿ’ ಪ್ರಶಸ್ತಿ ಪಡೆದಿದ್ದಾರೆ. ಅಲ್ಲದೇ, ‘ಪಿಂಕಿ’ ಎಲ್ಲಿ ಸಿನಿಮಾಗೆ ಮೊದಲ ‘ಅತ್ಯುತ್ತಮ’ ಸಿನಿಮಾ ಪ್ರಶಸ್ತಿ ಧಕ್ಕಿದೆ. ‘ವರ್ಣಪಟಲ’ ಸಿನಿಮಾಗೆ 2ನೇ ಅತ್ಯುತ್ತಮ ಸಿನಿಮಾ ಪ್ರಶಸ್ತಿ ಸಿಕ್ಕಿದೆ. ‘ಹರಿವ ನದಿಗೆ ಮೈಯೆಲ್ಲ ಕಾಲು’ ಸಿನಿಮಾಗೆ ಮೂರನೇ ಅತ್ಯುತ್ತಮ ಚಿತ್ರ ಪ್ರಶಸ್ತಿ ಸಿಕ್ಕಿದೆ.
‘ಗಿಳಿಯು ಪಂಚರದೊಳಿಲ್ಲ’ ಹಾಗೂ ‘ಈ ಮಣ್ಣು’ ಸಿನಿಮಾಗಳಿಗೆ ವಿಶೇಷ ಸಾಮಾಜಿಕ ಕಳಕಳಿಯ ಚಿತ್ರ ಪ್ರಶಸ್ತಿ ಲಭಿಸಿದೆ. ಅತ್ಯುತ್ತಮ ಜನಪ್ರಿಯ ಮನರಂಜನಾ ಸಿನಿಮಾ ಪ್ರಶಸ್ತಿಯನ್ನು ‘ಫೋರ್ ವಾಲ್ಸ್’ ಚಿತ್ರ ಪಡೆದುಕೊಂಡಿದೆ. ‘ಪದಕ’ ಸಿನಿಮಾ ‘ಅತ್ಯುತ್ತಮ ಮಕ್ಕಳ ಚಿತ್ರ’ ಪ್ರಶಸ್ತಿಗೆ ಭಾಜನವಾಗಿದೆ. ತುಳು ಭಾಷೆಯ ‘ಜೀಟಿಗೆ’ ಚಿತ್ರಕ್ಕೆ ಅತ್ಯುತ್ತಮ ಪ್ರಾದೇಶಿಕ ಭಾಷಾ ಸಿನಿಮಾ ಪ್ರಶಸ್ತಿ ಲಭಿಸಿದೆ.
‘ತಲೆದಂಡ’ ಸಿನಿಮಾದಲ್ಲಿನ ಅಭಿನಯಕ್ಕಾಗಿ ರಮೇಶ್ ಪಂಡಿತ್ ‘ಅತ್ಯುತ್ತಮ ಪೋಷಕ ನಟ’ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ‘ದಂತಪುರಾಣ’ ಸಿನಿಮಾ ನಟನೆಗಾಗಿ ಮಂಜುಳಮ್ಮಗೆ ‘ಅತ್ಯುತ್ತಮ ಪೋಷಕ ನಟಿ’ ಪ್ರಶಸ್ತಿ ನೀಡಲಾಗಿದೆ. ಅತ್ಯುತ್ತಮ ಸಂಗೀತ ನಿರ್ದೇಶನ ಪ್ರಶಸ್ತಿಯನ್ನು ಗಗನ್ ಬಡೇರಿಯಾ ಅವರು ‘ಮಾಲ್ಗುಡಿ ಡೇಸ್’ ಸಿನಿಮಾಗಾಗಿ ಧಕ್ಕಿಸಿಕೊಂಡಿದ್ದಾರೆ.
‘ಆಕ್ಟ್ 1978’ ಚಿತ್ರಕ್ಕಾಗಿ ನಾಗೇಂದ್ರ ಕೆ. ಉಜ್ಜನಿ ಅವರು ‘ಅತ್ಯುತ್ತಮ ಸಂಕಲನ’ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ‘ತಲೆದಂಡ’ ಚಿತ್ರಕ್ಕಾಗಿ ಅಶೋಕ್ ಕಶ್ಯಪ್ ‘ಅತ್ಯುತ್ತಮ ಛಾಯಾಗ್ರಹಣ’ ಪ್ರಶಸ್ತಿ ಪಡೆದಿದ್ದಾರೆ. ಮಾಸ್ಟರ್ ಆಹಿಲ್ ಅನ್ಸಾರಿಗೆ ‘ಅತ್ಯುತ್ತಮ ಬಾಲ ನಟ’ ಪ್ರಶಸ್ತಿ,. ‘ಪಾರು’ ಚಿತ್ರಕ್ಕಾಗಿ ಬೇಬಿ ಹಿತೈಷಿ ಪೂಜಾರ್ ‘ಅತ್ಯುತ್ತಮ ಬಾಲನಟಿ’ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.