ಅಹಮದಾಬಾದ್: ಕೇವಲ 20 ರೂಪಾಯಿ ಲಂಚ ಪಡೆದ ಆರೋಪ ಹೊತ್ತು 30 ವರ್ಷಗಳ ಕಾಲ ಕಾನೂನು ಹೋರಾಟ ನಡೆಸಿದ್ದ ನಿವೃತ್ತ ಕಾನ್ಸ್ಟೇಬಲ್ ಬಾಬೂಭಾಯಿ ಪ್ರಜಾಪತಿ, ಹೈಕೋರ್ಟ್ನಿಂದ ದೋಷಮುಕ್ತರಾದ ಮರುದಿನವೇ ನಿಧನರಾಗಿದ್ದಾರೆ. “ನನ್ನ ಮೇಲಿದ್ದ ಕಳಂಕ ಅಳಿಸಿಹೋಗಿದೆ, ಈಗ ನನಗೆ ಮುಕ್ತಿ ಸಿಗಲಿ” ಎಂದು ವಕೀಲರ ಬಳಿ ಹೇಳಿದ್ದ ಬಾಬೂಭಾಯಿ, ನೆಮ್ಮದಿಯಿಂದ ಇಹಲೋಕ ತ್ಯಜಿಸಿದ್ದಾರೆ.

1996ರ ಸಣ್ಣ ಘಟನೆ, ದಶಕಗಳ ಶಿಕ್ಷೆ
1996ರಲ್ಲಿ ಅಹಮದಾಬಾದ್ನ ವಜಲ್ಪುರದಲ್ಲಿ ಕಾನ್ಸ್ಟೇಬಲ್ ಆಗಿದ್ದ ಬಾಬೂಭಾಯಿ ಮೇಲೆ 20 ರೂಪಾಯಿ ಲಂಚ ಪಡೆದ ಆರೋಪ ಕೇಳಿಬಂದಿತ್ತು. ಈ ಸಣ್ಣ ಮೊತ್ತದ ಲಂಚದ ಪ್ರಕರಣವು ಅವರ ಜೀವನವನ್ನೇ ಅಸ್ತವ್ಯಸ್ತಗೊಳಿಸಿತ್ತು. 2004ರಲ್ಲಿ ಕೆಳ ನ್ಯಾಯಾಲಯವು ಅವರಿಗೆ ನಾಲ್ಕು ವರ್ಷಗಳ ಕಠಿಣ ಸಜೆ ಮತ್ತು 3,000 ರೂ. ದಂಡ ವಿಧಿಸಿತ್ತು. ಈ ತೀರ್ಪನ್ನು ಪ್ರಶ್ನಿಸಿ ಅವರು ಅದೇ ವರ್ಷ ಗುಜರಾತ್ ಹೈಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಅಂದಿನಿಂದ ಸುಮಾರು 22 ವರ್ಷಗಳ ಕಾಲ ಹೈಕೋರ್ಟ್ನಲ್ಲಿ ಈ ಪ್ರಕರಣದ ವಿಚಾರಣೆ ನಡೆಯುತ್ತಲೇ ಇತ್ತು.
ಕಳಂಕ ಮುಕ್ತವಾದ ಸಂತಸದಲ್ಲೇ ಕೊನೆಯುಸಿರು
ಈ ವರ್ಷದ ಫೆ. 4ರಂದು ಗುಜರಾತ್ ಹೈಕೋರ್ಟ್ ಬಾಬೂಭಾಯಿ ಪ್ರಜಾಪತಿ ಅವರನ್ನು ದೋಷಮುಕ್ತಗೊಳಿಸಿ ತೀರ್ಪು ನೀಡಿತು. ಸಾಕ್ಷ್ಯಾಧಾರಗಳ ಕೊರತೆ ಮತ್ತು ಹೇಳಿಕೆಗಳಲ್ಲಿನ ವಿರೋಧಾಭಾಸಗಳನ್ನು ಪರಿಗಣಿಸಿ ನ್ಯಾಯಾಲಯ ಈ ನಿರ್ಧಾರ ತಳೆಯಿತು. ತೀರ್ಪು ಬಂದ ನಂತರ ಅತ್ಯಂತ ಭಾವುಕರಾಗಿದ್ದ ಬಾಬೂಭಾಯಿ ತನ್ನ ವಕೀಲರಾದ ನಿತಿನ್ ಗಾಂಧಿ ಅವರನ್ನು ಭೇಟಿಯಾಗಿ, “ಇಷ್ಟು ವರ್ಷ ನನ್ನನ್ನು ಕಾಡುತ್ತಿದ್ದ ಕಳಂಕ ಕೊನೆಗೂ ದೂರವಾಯಿತು. ಈಗ ನನಗೆ ಮೋಕ್ಷ ಸಿಗಲಿ ಎಂಬ ಆಸೆ ಮಾತ್ರ ಉಳಿದಿದೆ” ಎಂದು ಹೇಳಿದ್ದರು. ಈ ದೃಶ್ಯಗಳು ವಕೀಲರ ಕಚೇರಿಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.
ಮಾರನೇ ದಿನವೇ ಕೊನೆಯುಸಿರು
ವಕೀಲರು ಬಾಬೂಭಾಯಿ ಅವರಿಗೆ ಪ್ರಕರಣದಿಂದಾಗಿ ತಡೆಹಿಡಿಯಲಾಗಿದ್ದ ಸರ್ಕಾರಿ ಸೌಲಭ್ಯಗಳು ಮತ್ತು ಬಾಕಿ ಹಣಕ್ಕೆ ಅರ್ಜಿ ಸಲ್ಲಿಸುವಂತೆ ಸಲಹೆ ನೀಡಿದ್ದರು. ಆದರೆ, ವಿಧಿಯ ಆಟವೇ ಬೇರೆಯಾಗಿತ್ತು. ಮನೆಗೆ ಮರಳಿದ ಮರುದಿನವೇ ಅವರು ಕೊನೆಯುಸಿರೆಳೆದರು. ಜೀವನದ ಬಹುಪಾಲು ಸಮಯವನ್ನು ನ್ಯಾಯಾಲಯದ ಮೆಟ್ಟಿಲು ಹತ್ತುವುದರಲ್ಲೇ ಕಳೆದಿದ್ದ ಆ ಜೀವಕ್ಕೆ, ಸಾಯುವ ಮುನ್ನ ತಾನು “ನಿರಪರಾಧಿ” ಎಂದು ಕೇಳಿಸಿಕೊಳ್ಳುವ ಸೌಭಾಗ್ಯ ಸಿಕ್ಕಿದ್ದು ಒಂದು ರೀತಿಯಲ್ಲಿ ಸಾರ್ಥಕ ಅಂತ್ಯದಂತಿದೆ. ಸುಮಾರು ಮೂರು ದಶಕಗಳ ಕಾಲ ಕುಟುಂಬದ ಗೌರವಕ್ಕಾಗಿ ಮತ್ತು ಸತ್ಯಕ್ಕಾಗಿ ಹೋರಾಡಿದ ಈ ಕಾನ್ಸ್ಟೇಬಲ್ನ ಕಥೆ ಅಹಮದಾಬಾದ್ನಲ್ಲಿ ಎಲ್ಲರ ಕಣ್ಣಾಲಿಗಳನ್ನು ತೇವಗೊಳಿಸಿದೆ.
ಇದನ್ನೂ ಓದಿ : ‘ಸಂಘ ಸೂಚಿಸಿದರೆ ಪದತ್ಯಾಗಕ್ಕೆ ಸಿದ್ಧ’ | RSS ಮುಖ್ಯಸ್ಥ ಮೋಹನ್ ಭಾಗವತ್



















