ಢಾಕಾ: ಬಾಂಗ್ಲಾದೇಶದ ಕ್ರಾಂತಿಯ ನಾಯಕ ಒಸ್ಮಾನ್ ಹಾದಿ ಹತ್ಯೆಯ ಬಳಿಕ ಆರಂಭವಾದ ಹಿಂಸಾಚಾರವು ಮುಂದುವರಿದಿದ್ದು, ಅಲ್ಪಸಂಖ್ಯಾತ ಹಿಂದೂಗಳ ಮೇಲೆ ರಾಕ್ಷಸರು ಮತ್ತಷ್ಟು ಅಟ್ಟಹಾಸ ಮೆರೆಯುತ್ತಿದ್ದಾರೆ. ಇದಕ್ಕೆ ಹೊಸ ಸೇರ್ಪಡೆಯೆಂಬಂತೆ, ಸೋಮವಾರ ಕೇವಲ ಕೆಲವೇ ಗಂಟೆಗಳ ಅಂತರದಲ್ಲಿ ಇಬ್ಬರು ಹಿಂದೂ ವ್ಯಕ್ತಿಗಳನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿದ್ದಾರೆ.
ಜೆಸ್ಸೋರ್ ಜಿಲ್ಲೆಯ ಕೇಶಬ್‌ಪುರದ ನಿವಾಸಿಯಾದ ರಾಣಾ ಪ್ರತಾಪ್ ಬೈರಾಗಿ (38) ಎಂಬುವವರನ್ನು ಮಣಿರಾಮ್‌ಪುರದ ಕಪಾಲಿಯಾ ಬಜಾರ್‌ನಲ್ಲಿ ಗುಂಡಿಕ್ಕಿ ಕೊಲ್ಲಲಾಗಿದೆ. ಬೈರಾಗಿ ಅವರು ಐಸ್ ಫ್ಯಾಕ್ಟರಿ ಮಾಲೀಕರಾಗಿದ್ದರು ಮತ್ತು ‘ದೈನಿಕ್ ಬಿಡಿ ಖಬರ್’ ಎಂಬ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕರಾಗಿದ್ದರು. ಸೋಮವಾರ ಸಂಜೆ ಬೈಕ್‌ನಲ್ಲಿ ಬಂದ ಮೂವರು ದುಷ್ಕರ್ಮಿಗಳು ಅವರನ್ನು ಫ್ಯಾಕ್ಟರಿಯಿಂದ ಹೊರಗೆ ಕರೆತಂದು, ತಲೆಗೆ ಗುಂಡಿಕ್ಕಿ ನಂತರ ಗಂಟಲು ಸೀಳಿ ಹತ್ಯೆ ಮಾಡಿದ್ದಾರೆ.
ಬೈರಾಗಿ ಅವರ ಮೇಲೆ ಈ ಹಿಂದೆ ಕೆಲವು ಕ್ರಿಮಿನಲ್ ಪ್ರಕರಣಗಳಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ. ಅವರು ನಿಷೇಧಿತ ‘ಪೂರ್ವ ಬಾಂಗ್ಲಾದ ಕಮ್ಯುನಿಸ್ಟ್ ಪಾರ್ಟಿ’ಯ ಸದಸ್ಯರಾಗಿದ್ದರು ಮತ್ತು ಆಂತರಿಕ ಕಲಹದಿಂದಾಗಿ ಈ ಹತ್ಯೆ ನಡೆದಿದೆ ಎಂದು ಪೊಲೀಸರು ಶಂಕಿಸಿದ್ದಾರೆ.
ಬೈರಾಗಿ ಹತ್ಯೆಯಾದ ಕೆಲವೇ ಗಂಟೆಗಳಲ್ಲಿ ನರಸಿಂಗಡಿ ಜಿಲ್ಲೆಯ ಚರಸಿಂಧೂರು ಬಜಾರ್‌ನಲ್ಲಿ 40 ವರ್ಷದ ಶರತ್ ಮಣಿ ಚಕ್ರವರ್ತಿ ಎಂಬವರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ಚಕ್ರವರ್ತಿ ಅವರು ದಿನಸಿ ಅಂಗಡಿ ನಡೆಸುತ್ತಿದ್ದರು. ಈ ಹಿಂದೆ ದಕ್ಷಿಣ ಕೊರಿಯಾದಲ್ಲಿ ಉದ್ಯೋಗದಲ್ಲಿದ್ದ ಅವರು ಕೆಲವು ವರ್ಷಗಳ ಹಿಂದಷ್ಟೇ ಬಾಂಗ್ಲಾದೇಶಕ್ಕೆ ಮರಳಿದ್ದರು. ಅಂಗಡಿಯಲ್ಲಿದ್ದಾಗಲೇ ಅವರ ಮೇಲೆ ಈ ದಾಳಿ ನಡೆದಿದೆ. ಇವರಿಗೆ ಪತ್ನಿ ಮತ್ತು 12 ವರ್ಷದ ಮಗನಿದ್ದಾನೆ.
ಬಾಂಗ್ಲಾದೇಶದಲ್ಲಿ ಆತಂಕದ ವಾತಾವರಣ
ಕಳೆದ ಒಂದು ತಿಂಗಳಲ್ಲಿ ಬಾಂಗ್ಲಾದೇಶದಲ್ಲಿ ಕನಿಷ್ಠ ಆರು ಮಂದಿ ಹಿಂದೂಗಳನ್ನು ಹತ್ಯೆ ಮಾಡಲಾಗಿದೆ. ಇತ್ತೀಚಿನ ಪ್ರಮುಖ ಘಟನೆಗಳು ಇಲ್ಲಿವೆ:
• ಜನವರಿ 3: ಖೋಕನ್ ಚಂದ್ರ ದಾಸ್ ಎಂಬುವವರನ್ನು ಬೆಂಕಿ ಹಚ್ಚಿ ಕೊಲ್ಲಲಾಗಿತ್ತು.
• ಡಿಸೆಂಬರ್ 24: ಅಮೃತ್ ಮೊಂಡಲ್ ಎಂಬುವವರ ಮೇಲೆ ಗುಂಪು ದಾಳಿ ನಡೆದಿತ್ತು. ಕೆಲವು ದಿನ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡಿದ್ದ ಅವರು, ನಂತರ ಚಿಕಿತ್ಸೆಗೆ ಸ್ಪಂದಿಸದೇ ಅಸುನೀಗಿದ್ದರು.
• ಡಿಸೆಂಬರ್ 18: ದೀಪು ಚಂದ್ರ ದಾಸ್ ಎಂಬ ಯುವಕನನ್ನು ಧರ್ಮನಿಂದನೆಯ ಸುಳ್ಳು ಆರೋಪ ಹೊರಿಸಿ ಕೊಲ್ಲಲಾಗಿತ್ತು. ನಂತರ ಶವವನ್ನು ಮರಕ್ಕೆ ಕಟ್ಟಿ ಬೆಂಕಿ ಹಚ್ಚಲಾಗಿತ್ತು.
ಬಾಂಗ್ಲಾದೇಶದ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ಈ ಸತತ ದಾಳಿಗಳ ಬಗ್ಗೆ ಭಾರತ ಸರ್ಕಾರವು ತೀವ್ರ ಕಳವಳ ವ್ಯಕ್ತಪಡಿಸಿದೆ. ಅಲ್ಲಿನ ಒಟ್ಟು ಜನಸಂಖ್ಯೆಯಲ್ಲಿ ಸುಮಾರು ಶೇ. 7.95 ರಷ್ಟು (1.31 ಕೋಟಿ) ಹಿಂದೂಗಳಿದ್ದಾರೆ. ಆದರೆ, ಮಧ್ಯಂತರ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಹಿಂದೂಗಳ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದೆ.
ಇದನ್ನೂ ಓದಿ: ಹಿರಿಯ ಕಾಂಗ್ರೆಸ್ ನಾಯಕ, ಮಾಜಿ ಕೇಂದ್ರ ಸಚಿವ ಸುರೇಶ್ ಕಲ್ಮಾಡಿ ನಿಧನ



















