ನೆಲಮಂಗಲ | ಕ್ರಿಸ್ಮಸ್ ಹಬ್ಬದ ರಜೆಗೆಂದು ಹುಟ್ಟೂರಿಗೆ ಹೋಗಿ ವಾಪಸ್ ಆಗುತ್ತಿದ್ದ ಸಂದರ್ಭದಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ಇಬ್ಬರು ಸಾವನ್ನಪ್ಪಿದ್ದು, ನಾಲ್ವರ ಸ್ಥಿತಿ ಚಿಂತಾಜನಕವಾಗಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ತೋಟಗೆರೆ ಕ್ರಾಸ್ನಲ್ಲಿ ಈ ಘಟನೆ ನಡೆದಿದೆ. ಗೌರಿಬಿದನೂರು ಮೂಲದ ಹರೀಶ್(39) ಮತ್ತು ವೀರಭದ್ರ(80) ಮೃತರು. ಕಾರಿನಲ್ಲಿದ್ದ ಗೌರಮ್ಮ, ಮೈತ್ರಿ, ಸಿರಿ, ವಂದನಾಗೆ ಗಂಭೀರ ಗಾಯಗಳಾಗಿದ್ದು, ನೆಲಮಂಗಲದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನಾ ಸ್ಥಳಕ್ಕೆ ಮಾದನಾಯಕನಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಸಂಜೆ 6ಗಂಟೆಗೆ ಗೌರಿಬಿದನೂರಿನಿಂದ ಹೊರಟಿದ್ದ ಕುಟುಂಬ, ರೈಲ್ವೆ ಗೊಲ್ಲಹಳ್ಲಿಯಿಂದ ಹೆಸರಘಟ್ಟ ಮಾರ್ಗವಾಗಿ ದಾಸರಹಳ್ಳಿಗೆ ತೆರಳುತ್ತಿದ್ದರು. ಆದರೆ ದಾರಿ ಮಧ್ಯೆ ತೋಟದ ಗುಡ್ಡದಹಳ್ಳಿ ಟರ್ನಿಂಗ್ ಬಳಿ ಲಾರಿಯೊಂದನ್ನು ಓವರ್ ಟೇಕ್ ಮಾಡುವ ವೇಳೆ ಎದುರಗಡೆ ಬಂದ ಲಾರಿಗೆ ಡಿಕ್ಕಿಯಾಗುವುದನ್ನು ತಪ್ಪಿಸಲು ಹೋಗಿ ಬಲಭಾಗಕ್ಕೆ ಕಾರನ್ನು ಎಳೆದಿದ್ದಾರೆ.
ಈ ವೇಳೆ ಕತ್ತಲಲ್ಲಿ ಎದುರಿಗೆ ಇದ್ದ ಮರಕ್ಕೆ ಕಾರು ಡಿಕ್ಕಿ ಹೊಡೆದಿದ್ದು, ಹರೀಶ್ ಹಾಗೂ ತಂದೆ ವೀರಭದ್ರ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನುಳಿದ ಮೈತ್ರಿ, ಗೌರಮ್ಮ, ಸಿರಿ, ವಂದನಾ ಸ್ಥಿತಿ ಚಿಂತಾಜನಕವಾಗಿದ್ದು, ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾರೆ. ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ಅರಣ್ಯಾಧಿಕಾರಿ ಮೇಲೆ ಕಾಡು ಹಂದಿ ಡೆಡ್ಲಿ ಅಟ್ಯಾಕ್ | ಭಯಾನಕ ಕಾಳಗದ ವಿಡಿಯೋ ಇಲ್ಲಿದೆ



















