ಪುಷ್ಪ 2 ಚಿತ್ರದ ಪ್ರಿಮಿಯರ್ ಶೋ ಪ್ರದರ್ಶನದ ಸಂದರ್ಭದಲ್ಲಿ ಸಂಧ್ಯಾ ಚಿತ್ರಮಂದಿರ ಕಾಲ್ತುಳಿತದಲ್ಲಿ ಸಾವನ್ನಪ್ಪಿದ ಮಹಿಳೆಯ ಕುಟುಂಬಕ್ಕೆ ಅಲ್ಲು ಅರ್ಜುನ್ ಹಾಗೂ ಚಿತ್ರ ತಂಡ ಎರಡು ಕೋಟಿ ರೂ. ಹಣ ಘೋಷಿಸಿದೆ. ಆಸ್ಪತ್ರೆಯಲ್ಲಿರುವ ಬಾಲಕನ ಸಂಪೂರ್ಣ ಚಿಕಿತ್ಸೆಯ ಖರ್ಚು ಭರಿಸುವುದಾಗಿ ಕೂಡ ಅಲ್ಲು ಅರ್ಜುನ್ ಹೇಳಿದ್ದಾರೆ ಎನ್ನಲಾಗಿದೆ.
ಘಟನೆ ನಂತರ ಜನರ ಪ್ರತಿಕ್ರಿಯೆ, ಸರ್ಕಾರದ ಹೇಳಿಕೆ, ಪೊಲೀಸರು ನಡೆದುಕೊಂಡ ರೀತಿಯ ನಂತರ ಸಂತ್ರಸ್ತ ಕುಟುಂಬಕ್ಕೆ ಎರಡು ಕೋಟಿ ರೂ. ಘೋಷಿಸಲಾಗಿದೆ. ನಟ ಅಲ್ಲು ಅರ್ಜುನ್ ಅವರ ತಂದೆ ಅಲ್ಲು ಅರವಿಂದ್ ಇಂದು ಕಾಲ್ತುಳಿತದಲ್ಲಿ ಗಾಯಗೊಂಡು ಆಸ್ಪತ್ರೆ ಪಾಲಾಗಿದ್ದ ಬಾಲಕನನ್ನು ಭೇಟಿಯಾಗಲು ಆಸ್ಪತ್ರೆಗೆ ತೆರಳಿದ್ದರು. ಈ ವೇಳೆ ಮಾತನಾಡಿದ ಅಲ್ಲು ಅರವಿಂದ್, ಗಾಯಗೊಂಡ ಬಾಲಕನ ಆರೋಗ್ಯ ಸುಧಾರಿಸುತ್ತಿದೆ. ಇದು ಖುಷಿಯ ಸಂಗತಿ. ಬಾಲಕನ ಕುಟುಂಬಕ್ಕೆ ನಾವು ಎರಡು ಕೋಟಿ ರೂಪಾಯಿ ಹಣ ನೀಡುವ ನಿರ್ಧಾರ ಮಾಡಿದ್ದೇವೆ ಎಂದು ಹೇಳಿದ್ದಾರೆ.
ಅಲ್ಲು ಅರ್ಜುನ್ ಒಂದು ಕೋಟಿ ರೂಪಾಯಿ ನೆರವು ನೀಡಲಿದ್ದಾರೆ. ‘ಪುಷ್ಪ 2’ ಸಿನಿಮಾದ ನಿರ್ಮಾಪಕರಾದ ಮೈತ್ರಿ ಮೂವಿ ಮೇಕರ್ಸ್ 50 ಲಕ್ಷ ರೂ., ಸಿನಿಮಾ ನಿರ್ದೇಶಕ ಸುಕುಮಾರ್ 50 ಲಕ್ಷ ರೂ., ಸೇರಿದಂತೆ ಒಟ್ಟು 2 ಕೋಟಿ ರೂ. ಪರಿಹಾರ ನೀಡಲಾಗುವುದು ಎಂದು ಹೇಳಿದ್ದಾರೆ.