ಬೆಂಗಳೂರು: ಮಾಜಿ ಸಚಿವ ವರ್ತೂರ್ ಪ್ರಕಾಶ್ ಹೆಸರು ಬಳಸಿಕೊಂಡು ಕೋಟ್ಯಾಂತರ ರೂ. ಚಿನ್ನಾಭರಣ ಖರೀದಿಸಿ ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆಯೊಬ್ಬರನ್ನು ಬಂಧಿಸಲಾಗಿದೆ.
ಬಂಧಿತ ಮಹಿಳೆ ಬಾಗಲಗುಂಟೆ ನಿವಾಸಿ ಶ್ವೇತಾಗೌಡ ಎನ್ನಲಾಗಿದೆ. ಇವರು ನಗರದ ಅವಿನ್ಯೂ ರಸ್ತೆಯ ನವರತ್ನ ಜ್ಯುವೆಲರ್ಸ್ ಮಳಿಗೆಯಲ್ಲಿ 2.42 ಕೋಟಿ ರೂ. ಮೌಲ್ಯದ ಚಿನ್ನಾಭರಣ ಖರೀದಿಸಿ ವಂಚಿಸಿದ್ದಾರೆ ಎನ್ನಲಾಗಿದೆ. ಅಲ್ಲದೇ, ವರ್ತೂರ್ ಪ್ರಕಾಶ್ ಅವರ ಹೆಸರು ಹೇಳಿಕೊಂಡು ಖರೀದಿಸಿದ್ದರು ಎಂದು ತಿಳಿದು ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪುಲಿಕೇಶಿ ನಗರ ಉಪ ವಿಭಾಗದ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಚಿನ್ನ ಹಾಗೂ ಕಾರು ಸೇರಿದಂತೆ ಇನ್ನಿತರ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.
ಶ್ವೇತಾ ಸಚಿವರ ವಿಳಾಸವನ್ನೇ ಕೊಟ್ಟಿದ್ದರು. ಹೀಗಾಗಿ ಸುಮಾರು 2.42 ಕೋಟಿ ರೂ. ಮೌಲ್ಯದ 2.945 ಕೆಜಿ ಚಿನ್ನವನ್ನು ನಗರದ ಡಾಲರ್ಸ್ ಕಾಲೋನಿಯಲ್ಲಿರುವ ಮಾಜಿ ಸಚಿವ ಹಾಗೂ ಕೋಲಾರ ಜಿಲ್ಲಾ ಬಿಜೆಪಿ ಮುಖಂಡ ವರ್ತೂರು ಪ್ರಕಾಶ್ ಅವರ ಮನೆಗೆ ಮಳಿಗೆಯು ತಲುಪಿಸಿತ್ತು.
ಹೀಗಾಗಿ ಈ ಪ್ರಕರಣದಲ್ಲಿ ಮಾಜಿ ಸಚಿವರಿಗೆ ಸಹ ತನಿಖೆ ಸಂಕಷ್ಟ ಎದುರಾಗಿದ್ದು, ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ ಎಂದು ತಿಳಿದು ಬಂದಿದೆ. ಸದ್ಯ ಈ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ.