ಹಾಸನ : ಇಡೀ ದೇಶವನ್ನೇ ತನ್ನತ್ತ ಸೆಳೆಯುತ್ತಿರುವ ರಾಜ್ಯದ ಶಕ್ತಿ ಕೇಂದ್ರ, ಹಾಸನಾಂಬೆಯ ತವರು ಹಾಸನದಲ್ಲಿ ಮೇಳೈಸುತ್ತಿರುವ ಹಾಸನಾಂಬೆ ಉತ್ಸವಕ್ಕೆ ನಾಳೆ ತೆರೆಬೀಳಲಿದೆ. ಅ.10ರಿಂದ ಆರಂಭವಾಗಿರುವ ಸಾರ್ವಜನಿಕ ದರ್ಶನ ಅ. 22 ಅಂದರೆ ನಾಳೆಯೇ ಕೊನೆಯಾಗಲಿದೆ.
ಕೇವಲ 12 ದಿನಗಳಲ್ಲಿ ಬರೋಬ್ಬರಿ 23 ಲಕ್ಷಕ್ಕೂ ಹೆಚ್ಚು ಭಕ್ತರು ದೇವಿ ದರ್ಶನ ಮಾಡಿದ್ದರೆ, ಟಿಕೆಟ್ ಹಾಗೂ ಲಡ್ಡು ಪ್ರಸಾದ ಮಾರಾಟದಿಂದ ಬರೋಬ್ಬರಿ 17 ಕೋಟಿ ರೂ. ಹೆಚ್ಚು ಆದಾಯ ಹರಿದು ಬಂದಿದೆ. ಆ ಮೂಲಕ ಹಾಸನಾಂಬೆ ದರ್ಶನೋತ್ಸವದ ಈವರೆಗಿನ ಎಲ್ಲಾ ದಾಖಲೆಗಳನ್ನು ಮೀರಿಸಿದೆ.
ಕಳೆದ 12 ದಿನಗಳಿಂದ ದೇಶದ ಮೂಲೆ ಮೂಲೆಗಳಿಂದ ಹರಿದು ಬಂದ ಭಕ್ತ ಸಾಗರ ಹಾಸನಾಂಬೆಯ ಆಶೀರ್ವಾದ ಪಡೆಯುತ್ತಿದ್ದಾರೆ. ಇಂದು ಮಂಗಳವಾರ ಆಗಿರುವುದರಿಂದ ಅಪಾರ ಸಂಖ್ಯೆಯ ಭಕ್ತರು ಹಾಸನಾಂಬೆ ದರ್ಶನಕ್ಕಾಗಿ ಕಾಯುತ್ತಿದ್ದಾರೆ.
ಅಕ್ಟೋಬರ್ 9ರ ಗುರುವಾರ ದೇಗುಲದ ಬಾಗಿಲು ತೆರೆಯಲಾಗಿದ್ದು, ಅಕ್ಟೋಬರ್ 10ರ ಶುಕ್ರವಾರದಿಂದ ಭಕ್ತರ ದರ್ಶನಕ್ಕೆ ಅವಕಾಶ ನೀಡಲಾಗಿತ್ತು. ಮೊದಲ ನಾಲ್ಕು ದಿನ ಸರಾಸರಿ ಒಂದುವರೆ ಲಕ್ಷದಷ್ಟು ಭಕ್ತರು ದರ್ಶನ ಪಡರೆ ಅಕ್ಟೋಬರ್ 17ರ ಏಕಾದಶಿ ದಿನ ದಾಖಲೆಯ ನಾಲ್ಕು ಲಕ್ಷ ಭಕ್ತರು ಹಾಸನಾಂಬೆ ದರ್ಶನ ಪಡೆದಿದ್ದಾರೆ. ನಂತರ ನಿತ್ಯವು ಎರಡರಿಂದ ಎರಡುವರೆ ಲಕ್ಷ ಭಕ್ತರು ಹಾಸನಾಂಬೆಯ ಆಶೀರ್ವಾದ ಪಡೆದು ವರ್ಷಕ್ಕೆ ಒಮ್ಮೆ ದರ್ಶನ ಕೊಡುವ ಮಹಾತಾಯಿಯನ್ನ ಕಣ್ತುಂಬಿಕೊಂಡಿದ್ದಾರೆ.
ಕೇವಲ ಭಕ್ತರು ಮಾತ್ರವಲ್ಲ ರಾಜಕೀಯ ನಾಯಕರು, ಸಿನಿತಾರೆಯರು, ವಿವಿಧ ಮಠಾಧೀಶರು, ನಾಡಿನ ಪ್ರತಿಷ್ಠಿತರು ದೇವಿಯ ದರ್ಶನ ಪಡೆದುಕೊಂಡಿದ್ದಾರೆ. ನಿನ್ನೆ ವಿಪಕ್ಷ ನಾಯಕ ಆರ್ ಅಶೋಕ್, ಶಾಸಕರುಗಳಾದ ಜಿಟಿ ದೇವೇಗೌಡ, ಭಾಗೀರತಿ, ಸಿಎನ್ ಬಾಲಕೃಷ್ಣ, ಮಾಜಿ ಡಿಸಿಎಂ ಕೆಎಸ್ ಈಶ್ವರಪ್ಪ ಸೇರಿ ಹಲವು ಗಣ್ಯರು ಹಾಸನಾಂಬೆಯ ದರ್ಶನ ಪಡೆದಿದ್ದಾರೆ.
ಒಟ್ಟಿನಲ್ಲಿ ವರ್ಷಕ್ಕೆ ಒಮ್ಮೆ ಮಾತ್ರ ಸಿಗುವ ಪುಣ್ಯಕ್ಷೇತ್ರ ಹಾಸನದ ಹಾಸನಾಂಬೆ ದರ್ಶನದ ಭಾಗ್ಯ ಇನ್ನೊಂದೇ ದಿನಕ್ಕೆ ಅಂತ್ಯವಾಗಲಿದೆ. ಲಕ್ಷ ಲಕ್ಷ ಭಕ್ತರಿಗೆ ಆಶೀರ್ವಾದ ಮಾಡುವ ಮಹಾತಾಯಿ ಹಾಸನಾಂಬೆ ಗರ್ಭಗುಡಿಯಲ್ಲಿ ನೆಲೆಸಲಿದ್ದು, ಮತ್ತೆ ದರ್ಶನಕ್ಕಾಗಿ ಒಂದು ವರ್ಷ ಕಾಯಬೇಕಿದೆ. ಕೊನೆಯ ದಿನದ ದರ್ಶನಕ್ಕೂ ಅಪಾರ ಸಂಖ್ಯೆ ಭಕ್ತರು ಹರಿದು ಬರಲಿದ್ದು. ಜಿಲ್ಲಾಡಳಿತ ಸೂಕ್ತ ವ್ಯವಸ್ಥೆ ಮಾಡಿಕೊಂಡಿದೆ.