ನವದೆಹಲಿ: ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ಜಗದೀಶ್ ಶೆಟ್ಟರ್ ಸದ್ಯದಲ್ಲೇ, ಕ್ಷೇತ್ರದ ಜನತೆಗೆ ಗುಡ್ ನ್ಯೂಸ್ ನೀಡಲಿದ್ದಾರೆ. ದೇಶದಲ್ಲೇ ಎಲ್ಲರ ಗಮನ ಸೆಳೆದಿರುವ ವಂದೇ ಭಾರತ್ ರೈಲು ಸಂಚಾರವನ್ನು ಬೆಂಗಳೂರಿನಿಂದ ಬೆಳಗಾವಿಯವರೆಗೂ ವಿಸ್ತರಿಸುವ ಮೂಲಕ ಕ್ಷೇತ್ರದ ಜನತೆಗೆ ಗುಡ್ ನ್ಯೂಸ್ ನೀಡಲಿದ್ದಾರೆ.
ಸದ್ಯ ವಂದೇ ಭಾರತ್ ರೈಲು ಬೆಂಗಳೂರು-ಧಾರವಾಡದ ಮಧ್ಯೆ ಸಂಚಾರ ಮಾಡುತ್ತಿದ್ದು ಅದನ್ನು ಬೆಳಗಾವಿಯವರೆಗೂ ವಿಸ್ತರಿಸುವ ಬಗ್ಗೆ ಕೇಂದ್ರ ಸರ್ಕಾರದ ಜೊತೆಗೆ ಸಂಸದ ಜಗದೀಶ್ ಶೆಟ್ಟರ್ ಮಾತುಕತೆ ನಡೆಸಿದ್ದಾರೆ.
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರನ್ನೊಳಗೊಂಡ ತಂಡದ ಜೊತೆಗೆ ಕಳೆದ ಮೂರ್ನಾಲ್ಕು ದಿನಗಳ ಹಿಂದೆ ಜಗದೀಶ್ ಶೆಟ್ಟರ್ ಮಾತುಕತೆ ಮಾಡಿದ್ದು, ರೈಲು ಸಂಖ್ಯೆ 20661/20662 ಬೆಂಗಳೂರು-ಧಾರವಾಡ ಮಧ್ಯೆ ಸದ್ಯಕ್ಕೆ ಪ್ರಯಾಣ ಬೆಳೆಸುತ್ತಿದೆ. ಇನ್ನು ಧಾರವಾಡ ಹಾಗೂ ಬೆಳಗಾವಿ ಮಧ್ಯೆ ಪ್ರಾಯೋಗಿಕ ಸಂಚಾರ (ಪರೀಕ್ಷಾರ್ಥ ಸಂಚಾರ) ಮುಕ್ತಾಯವಾಗಿದ್ದು, ಮುಂದಿನ ತಿಂಗಳ 5 ನೇ ತಾರೀಖಿನೊಳಗೆ ವಂದೇ ಭಾರತ್ ರೈಲು ಬೆಂಗಳೂರು-ಬೆಳಗಾವಿ ಮಧ್ಯೆ ಯಾವಾಗಿನಿಂದ ಪ್ರಯಾಣ ಬೆಳೆಸಲಿದೆ ಎಂಬುದು ಅಧಿಕೃತವಾಗಿ ತಿಳಿಯಲಿದೆ.
ಇದರ ಜೊತೆಗೆ ಸದ್ಯ ತಾತ್ಕಾಲಿಕ ವೇಳಾಪಟ್ಟಿಯೊಂದು ದೊರೆತಿದ್ದು ಅದರ ಪ್ರಕಾರವೇ ವಂದೇ ಭಾರತ್ ರೈಲು ಬೆಂಗಳೂರಿನ ಬದಲಿಗೆ ಯಶವಂತಪುರ ರೈಲು ನಿಲ್ದಾಣದವರೆಗೂ ಮಾತ್ರ ಪ್ರಯಾಣ ಬೆಳೆಸಲಿದೆ. ಇದರರ್ಥ ಬೆಳಗಾವಿ-ಯಶವಂತಪುರ ಎಂದು ರೈಲು ಬದಲಾವಣೆಯಾಗಲಿದೆ ಎಂದು.
ಇತ್ತ ಬೆಳಗಾವಿ ರೈಲು ನಿಲ್ದಾಣದಿಂದ ಬೆಳಿಗ್ಗೆ 5:30 ಕ್ಕೆ ರೈಲು ಹೊರಡಲಿದ್ದು, 7:15 ಕ್ಕೆ ಧಾರವಾಡ, 7:55 ಕ್ಕೆ ಹುಬ್ಬಳ್ಳಿ, 9 ಘಂಟೆಗೆ ದಾವಣಗೆರೆ, 10:55 ಕ್ಕೆ ಅರಸೀಕೆರೆ, 12 ಘಂಟೆಗೆ ತುಮಕೂರು, 1 ಘಂಟೆಗೆ ಯಶವಂತಪುರ ನಿಲ್ದಾಣಕ್ಕೆ ಬಂದು ತಲುಪಲಿದೆ.
ಇತ್ತ ಯಶವಂತಪುರ ನಿಲ್ದಾಣದಿಂದ ಮಧ್ಯಾಹ್ನ 2:30 ಕ್ಕೆ ರೈಲು ಹೊರಡಲಿದ್ದು, 3:25 ಕ್ಕೆ ತುಮಕೂರು, 5:30 ಕ್ಕೆ ಅರಸೀಕೆರೆ, 6:25 ಕ್ಕೆ ದಾವಣಗೆರೆ, 7:45 ಕ್ಕೆ ಹುಬ್ಬಳ್ಳಿ, 8:25 ಕ್ಕೆ ಧಾರವಾಡ, ರಾತ್ರಿ 10:30 ಕ್ಕೆ ಬೆಳಗಾವಿ ರೈಲು ನಿಲ್ದಾಣಕ್ಕೆ ವಂದೇ ಭಾರತ್ ತಲುಪಲಿದೆ ಎಂಬ ಮಾಹಿತಿ ದೊರೆತಿದೆ.