ಬೆಂಗಳೂರು: ಕ್ಯಾನ್ಸರ್ ನಿಂದ ಬಳಲುತ್ತಿದ್ದ ವಿದ್ಯಾರ್ಥಿ ಎದೆಗುಂದದೆ ಐಸಿಎಸ್ ಇ( ಬೋರ್ಡ್ 10) ಉತ್ತಮ ಸಾಧನೆ ಮಾಡಿ ಜನರ ಮೆಚ್ಚುಗೆಗೆ ಪಾತ್ರನಾಗಿದ್ದಾನೆ.
ಚಿರಂತನ್ ಹೊನ್ನಾಪುರ ಎಂಬ ವಿದ್ಯಾರ್ಥಿ ಕ್ಯಾನ್ಸರ್ ಜೊತೆ ಹೋರಾಟ ನಡೆಸುತ್ತ, ಯಾರ ಸಹಾಯವೂ ಇಲ್ಲದೆ ಐಸಿಎಸ್ ಇ ಬೋರ್ಡ್ ಪರೀಕ್ಷೆಯಲ್ಲಿ ಶೇ. 92ರಷ್ಟು ಅಂಕಗಳನ್ನು ಪಡೆದು ಉತ್ತೀರ್ಣನಾಗಿದ್ದಾನೆ.
ನಾಗರಬಾವಿಯ ಆರ್ಯನ್ ಪ್ರೆಸಿಡೆನ್ಸಿ ಶಾಲೆಯ ವಿದ್ಯಾರ್ಥಿ ಚಿರಂತನ್ 9ನೇ ತರಗತಿಯಲ್ಲಿ ಓದುತ್ತಿದ್ದ ಸಂದರ್ಭದಲ್ಲಿ ಮೂಳೆಯ ಕ್ಯಾನ್ಸರ್ ಗೆ ತುತ್ತಾಗಿದ್ದ. ಹೀಗಾಗಿ ಆತನಿಗೆ ವೈದ್ಯರು ಚಿಕಿತ್ಸೆಯ ಅಗತ್ಯವಿದೆ ಎಂದು ಸಲಹೆ ನೀಡಿದ್ದರು.
ಈ ಹಿನ್ನೆಲೆಯಲ್ಲಿ ಆತನಿಗೆ ಶಾಲೆಗೆ ಹೋಗಲು ಆಗಿರಲಿಲ್ಲ. ಒಂದೆಡೆ ಓದು, ಇನ್ನೊಂದೆಡೆ ಮಹಾಮಾರಿ ಕ್ಯಾನ್ಸರ್ ವಿರುದ್ಧ ಬಾಲಕನ ಹೋರಾಟ ಮುಂದುವರೆದಿತ್ತು. ಎಲ್ಲರಂತೆ ಆತ ಆಟ, ಪಾಠಗಳಿಂದ ದೂರವಾಗಿದ್ದ. ಶಾಲೆಯ ಪಾಠವಿರಲಿಲ್ಲ, ಟ್ಯೂಷನ್ ಇರಲಿಲ್ಲ. ಸ್ನೇಹಿತರ ನೋಟ್ಸ್ ಸಿಗುತ್ತಿರಲಿಲ್ಲ. ಆದರೂ ಚಿರಂತನ್ ಮಾತ್ರ ತನ್ನ ಕನಸು, ಹೋರಾಟದಿಂದ ದೂರ ಉಳಿದಿರಲಿಲ್ಲ.

ಚಿಕ್ಕ ವಯಸ್ಸಿನಲ್ಲಿಯೇ ದೊಡ್ಡ ರಿಸ್ಕ್ ನ್ನು ಹಗುರವಾಗಿಯೇ ತೆಗೆದುಕೊಂಡ ವಿದ್ಯಾರ್ಥಿ ಚಿರಂತನ್, ಎಲ್ಲರೂ ಮೆಚ್ಚುವಂತಹ ಸಾಧನೆ ಮಾಡಿದ್ದಾನೆ. ಕ್ಯಾನ್ಸರ್ ವಿರುದ್ಧ ಹೋರಾಡಿದ ಈತನ ಬಲಗೈಯ ಕ್ಯಾನ್ಸರ್ ಪೀಡಿತ ಮೂಳೆಯನ್ನು ಶಸ್ತ್ರ ಚಿಕಿತ್ಸೆ ಮೂಲಕ ತೆಗೆದು ಹಾಕಲಾಗಿತ್ತು. ರೈಟರ್ ಸಹಾಯದಿಂದ 9ನೇ ತರಗತಿ ಪರೀಕ್ಷೆಯಲ್ಲಿ ಚಿರಂತನ್ ಶೇ. 82 ರಷ್ಟು ಅಂಕ ಪಡೆದಿದ್ದ. ಈಗ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದು ಶೇ. 92ರಷ್ಟು ಅಂಕ ಪಡೆದು ತಂದೆ -ತಾಯಿಗಳಷ್ಟೇ ಅಲ್ಲ, ಶಿಕ್ಷಕರು, ಸ್ನೇಹಿತರ ಕಣ್ಣಲ್ಲೂ ನೀರು ಬರುವಂತಹ ಸಾಧನೆ ಮಾಡಿದ್ದಾನೆ.



















