ಚಾಮರಾಜನಗರ: ನಗರದಲ್ಲಿ ಇಂದು ಬೆಳ್ಳಂಬೆಳಗ್ಗೆ ಬಂಡೀಪುರ ಉಳಿಸಿ ಅಭಿಯಾನ ಕೈಗೊಳ್ಳಲಾಗಿದೆ. ಬೆಳ್ಳಂಬೆಳಗ್ಗೆ ಮಾನವ ಸರಪಳಿ ರಚಿಸಿ ಬಂಡೀಪುರ ರಕ್ಷಿಸಿ ಎಂದು ಪ್ರತಿಭಟನೆ ನಡೆಸಲಾಯಿತು.
ನಗರದ ಭುವನೇಶ್ವರಿ ವೃತ್ತದಲ್ಲಿ ಮಾನವ ಸರಪಳಿ ರಚಿಸಿ ಸಂಜೀವಿನಿ ಟ್ರಸ್ಟ್ ಸೇರಿದಂತೆ ವಿವಿಧ ಪರಿಸರ ಸಂರಕ್ಷಣಾ ಸಂಘಟನೆಗಳು ಪ್ರತಿಭಟನೆ ನಡೆಸಿದವು. ಬಂಡೀಪುರ ಅರಣ್ಯ ಪ್ರದೇಶದಲ್ಲಿ ರಾತ್ರಿ ವಾಹನ ಸಂಚಾರ ನಿಷೇಧ ಮುಂದುವರಿಯಬೇಕು. ಇಲ್ಲದಿದ್ದಲ್ಲಿ ವನ್ಯಜೀವಿಗಳ ಪ್ರಾಣಕ್ಕೆ ಕಂಟಕವಾಗಿ ಪರಿಸರಕ್ಕೆ ತುಂಬಾ ಹಾನಿಯಾಗುತ್ತದೆ ಎಂದು ಮನವಿ ಮಾಡಲಾಯಿತು.
ಹಿಂದೆ ರಾಹುಲ್ ಗಾಂದಿ ವಯನಾಡ್ ಸಂಸದರಾಗಿದ್ದಾಗಲೂ ಈ ಭಾಗದಲ್ಲಿ ರಾತ್ರಿ ವೇಳೆ ಸಂಚಾರಕ್ಕೆ ಅವಕಾಶ ನೀಡಬೇಕೆಂದು ಒತ್ತಡ ಹಾಕಿದ್ದರು. ಈಗ ಪ್ರಿಯಾಂಕಾ ಗಾಂಧಿ ವಾದ್ರಾ ಮೂಲಕವೂ ಒತ್ತಡ ಕೇಳಿ ಬರುತ್ತಿದೆ. ಆದರೆ, ರಾಜ್ಯ ಸರ್ಕಾರ ಕೇರಳದ ಯಾವುದೇ ಲಾಬಿಗೆ ಮಣಿಯಬಾರದು. ರಾಜಕೀಯ ಹಿತಾಸಕ್ತಿಗೆ ವನ್ಯ ಜೀವಿಗಳನ್ನು ಬಲಿ ಕೊಡಬಾರದು ಎಂದು ಒತ್ತಾಯಿಸಲಾಯಿತು. ಈ ವೇಳೆ ಅರ್ಧ ಗಂಟೆಗೂ ಅಧಿಕ ಸಮಯ ಮಾನವ ಸರಪಳಿ ರಚಿಸಿ ಒತ್ತಾಯಿಸಲಾಯಿತು.



















