ಮುಂಬೈ: ಬಾಲಿವುಡ್ ನಟ ಸೈಫ್ ಅಲಿ ಖಾನ್ ಅವರ ನಿವಾಸದಲ್ಲಿಯೇ ದಾಳಿ ಮಾಡಿದ (Attack on Saif) ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ಶನಿವಾರ (ಜನವರಿ 18) ಮಧ್ಯಪ್ರದೇಶದಲ್ಲಿ ಶಂಕಿತನೊಬ್ಬನ್ನು ವಶಕ್ಕೆ ಪಡೆದಿದ್ದಾರೆ.
ಶಂಕಿತನನ್ನು ಶನಿವಾರ (ಜನವರಿ 18) ಮುಂಜಾನೆ ವಶಕ್ಕೆ ತೆಗೆದುಕೊಳ್ಳಲಾಗಿದೆ. ಆತನನ್ನು ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ ಎಂದು ಮೂಲಗಳು ಇಂಡಿಯಾ ಟುಡೇ ಟಿವಿಗೆ ತಿಳಿಸಿವೆ.
ಘಟನೆ ನಡೆದು 60 ಗಂಟೆಗಳು ಕಳೆದರೂ ಆರೋಪಿಯನ್ನು ಪತ್ತೆ ಹಚ್ಚಲು ಪೊಲೀಸರಿಗೆ ಸಾಧ್ಯವಾಗಿಲ್ಲ. ಏತನ್ಮಧ್ಯೆ ಆರೋಪಿಯು ಸೈಫ್ ಅಲಿ ಖಾನ್ ಮೇಲೆ ಹಲ್ಲೆ ನಡೆಸಿದ ನಂತರ ದಾದರ್‌ನ ಅಂಗಡಿಯಿಂದ ಹೆಡ್‌ಫೋನ್ ಒಂದನ್ನು ಖರೀದಿಸಿದ್ದ ಎಂಬುದು ಸಿಸಿಟಿವಿ ಕ್ಯಾಮೆರಾಗಳಲ್ಲಿ ದಾಖಲಾಗಿವೆ.
ಮುಂಬೈ ಪೊಲೀಸರ ಪ್ರಕಾರ ದುಷ್ಕರ್ಮಿ ಮುಂಬೈ ಸುತ್ತಲೂ ಪ್ರಯಾಣಿಸಲು ಅಥವಾ ಬೇರೆ ಸ್ಥಳಕ್ಕೆ ಪರಾರಿಯಾಗಲು ಬಾಂದ್ರಾದಿಂದ ರೈಲು ಹತ್ತಿದ್ದಾನೆ. ಆರೋಪಿಯನ್ನು ಪತ್ತೆಹಚ್ಚಲು ಪೊಲೀಸ್ ತಂಡಗಳು ಪ್ರಸ್ತುತ ನಗರದ ವಿವಿಧ ರೈಲ್ವೆ ನಿಲ್ದಾಣಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದೆ.
ಮೂಲಗಳ ಪ್ರಕಾರ, ಸೈಫ್ ಅಲಿ ಖಾನ್ ಕಿರಿಯ ಮಗ ಜಹಾಂಗೀರ್ (ಜೆಹ್) ಕೋಣೆಗೆ ನುಗ್ಗಿದ್ದ. ಆದರೆ, ಕೋಣೆಯಲ್ಲಿದ್ದ ಯಾವುದೇ ಆಭರಣವನ್ನು ಮುಟ್ಟಿರಲಿಲ್ಲ.
ಸೈಫ್ ಅವರ ಪತ್ನಿ, ನಟಿ ಕರೀನಾ ಕಪೂರ್ ಖಾನ್ ಕೂಡ ಮುಂಬೈ ಪೊಲೀಸರಿಗೆ ಮಾಹಿತಿ ನೀಡಿದ್ದು, ಆರೋಪಿಯು ದಾಳಿ ಮಾಡುವ ಉದ್ದೇಶ ಹೊಂದಿದ್ದನೇ ಹೊರತು ದರೋಡೆಯ ಉದ್ದೇಶ ಇರಲಿಲ್ಲ ಎಂದು ಹೇಳಿದ್ದಾರೆ.
ಸೈಫ್ ಚೇತರಿಕೆ
ಸೈಫ್ ಅಲಿ ಖಾನ್ ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರ ತಂಡವು ಶನಿವಾರ ಮಾತನಾಡಿ, ನಟ ಚೇತರಿಸಿಕೊಳ್ಳುತ್ತಿದ್ದಾರೆ ಮತ್ತು ಎರಡು ಮೂರು ದಿನಗಳಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ ಎಂದು ಹೇಳಿದ್ದಾರೆ. ಆರಂಭದಲ್ಲಿ ಲೀಲಾವತಿ ಆಸ್ಪತ್ರೆಯ ಐಸಿಯುಗೆ ದಾಖಲಾಗಿದ್ದ ಅವರನ್ನು ಸಾಮಾನ್ಯ ವಾರ್ಡ್‌ಗೆ ಸ್ಥಳಾಂತರಿಸಲಾಗಿತ್ತು. ನಟ ನಡೆದುಕೊಂಡು ಹೋಗುತ್ತಿದ್ದಾರೆ ಮತ್ತು ಸಾಮಾನ್ಯ ಆಹಾರ ಸೇವಿಸುತ್ತಿದ್ದಾರೆ ಎಂದು ವೈದ್ಯರು ಮಾಹಿತಿ ನೀಡಿದರು.