ಮೈಸೂರು: ಸರ್ಕಾರದಿಂದಲೇ ಉತ್ತಮ ಗುಣಮಟ್ಟದ ಫಿಲ್ಮ್ ಸಿಟಿ ನಿರ್ಮಾಣ ಮಾಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಬೆಂಗಳೂರಿನಲ್ಲಿ 16ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ನಾನು ಹಿಂದಿನ ಅವಧಿಯಲ್ಲಿ ಸಿಎಂ ಆಗಿದ್ದಾಗ ಫಿಲ್ಮ್ ಸಿಟಿ ಮಾಡುವುದಾಗಿ ಘೋಷಿಸಿದ್ದೆ. ಈಗ ಕೊಟ್ಟ ಮಾತಿನಂತೆ ಜಿಲ್ಲೆಯಲ್ಲಿ ಫಿಲ್ಮ್ ಸಿಟಿ ಮಾಡುತ್ತೇವೆ. ನಾನು ಹಿಂದಿನ ಅಧಿಕಾರವಧಿ ಪೂರ್ಣಗೊಳಿಸಿದ ನಂತರ, ಕುಮಾರಸ್ವಾಮಿ ರಾಮನಗರಕ್ಕೆ ತೆಗೆದುಕೊಂಡು ಹೋಗಬೇಕು ಅಂತ ಅದನ್ನು ಕೈಬಿಟ್ಟರು. ಆದರೆ, ಈಗ ಈ ಕುರಿತು ಚಿಂತನೆ ನಡೆದಿದ್ದು, ಜಿಲ್ಲೆಯಲ್ಲಿ ಸ್ಥಾಪಿಸುತ್ತೇವೆ ಎಂದು ಭರವಸೆ ನೀಡಿದ್ದಾರೆ.
ಈಗಾಗಲೇ 150 ಎಕರೆ ಜಾಗವನ್ನು ನೀಡಲಾಗಿದೆ. ಸರ್ಕಾರ ನಿಮ್ಮ ಜೊತೆ ಇರಲಿದೆ. ಜನರಲ್ಲಿ ಅಸಂತೋಷ, ಅಸಹನೆ, ವೈಷಮ್ಯ ಜಾಸ್ತಿ ಬೆಳೆಯುತ್ತಿದೆ. ಪ್ರೀತಿ ಅಭಿಮಾನಿ ಕಡಿಮೆ ಆಗುತ್ತಿದೆ. ಹೀಗಾಗಿ ಅಶಾಂತಿ ಉಂಟಾಗುತ್ತಿದೆ. ಹೀಗಾಗಿ ನಮ್ಮ ಸಂಸ್ಕೃತಿ ಮತ್ತೆ ಬರಬೇಕಿದೆ. ಚಲನಚಿತ್ರ ಅದು ನಮ್ಮ ಸಂಸ್ಕೃತಿ. ನಮ್ಮ ಬದುಕಿನ ಸಂಸ್ಕೃತಿ, ನಾಡಿನ, ದೇಶದ, ವಿದೇಶದ ಸಂಸ್ಕೃತಿಯನ್ನ ಜನರಿಗೆ ಪರಿಚಯ ಮಾಡಿಸುವುದಕ್ಕಾಗಿ ಚಲನಚಿತ್ರೋತ್ಸವ ಮಾಡುತ್ತಿದ್ದೇವೆ. ಸಿನಿಮಾ ಪ್ರಭಾವಿ ಮಾಧ್ಯಮ. ಸಿನಿಮಾ ಜನ, ಸಮಾಜ ಎದುರಿಸುವ ಸಮಸ್ಯೆಯ ಆಳ ತಿಳಿಸುವ ಕೆಲಸ ಮಾಡುತ್ತದೆ ಎಂದು ಹೇಳಿದರು.
ಸಂವಿಧಾನ ಜಾತಿರಹಿತ ಸಮಾಜ ನಿರ್ಮಾಣ, ಸಾಮಾಜಿಕ ನ್ಯಾಯ ಇರಬೇಕು. ಅಸಮಾನತೆ ಹೋಗಬೇಕು. ಇಂದಿಗೂ ಅಸಮಾನತೆ ಸಮಾಜದಲ್ಲಿ ಹೋಗಿಲ್ಲ. ಅಸಮಾನತೆ ಹೋಗಬೇಕು ಅಂತ ಅಂಬೇಡ್ಕರ್ ಹೇಳಿದ್ದರು. ಆರ್ಥಿಕವಾಗಿ, ಸಾಮಾಜಿಕವಾಗಿ ಜನ ಸಬಲರಾಗಬೇಕು ಎಂದು ಕರೆ ನೀಡಿದ್ದಾರೆ.