ಸುಂದರಿ ಅಂತಾ ಹಿಂದೆ ಹೋದ ಅಂಕಲ್ ಗೆ ಪೊಲೀಸರ ಸೋಗಿನಲ್ಲಿ ಹೆದರಿಸಿ ವಂಚಿಸಿರುವ ಘಟನೆ ನಡೆದಿದೆ.
ಬ್ಯಾಡರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. 57 ವರ್ಷದ ಅಂಕಲ್ ಗೆ 20 ವರ್ಷದ ಯುವತಿ ಮತ್ತು ಗ್ಯಾಂಗ್ ನಿಂದ ವಂಚಿಸಲಾಗಿದೆ.


ಅಂಕಲ್ ಗುತ್ತಿಗೆದಾರರಾಗಿದ್ದಾರೆ. ಈ ವ್ಯಕ್ತಿಗೆ ಸ್ನೇಹಿತರೊಬ್ಬರಿಂದ ನಯನ ಎಂಬ ಯುವತಿಯ ಪರಿಚಯವಾಗಿದೆ. ಆನಂತರ ನಯನ ಅಂಕಲ್ ಜೊತೆ ಸಲುಗೆ ಬೆಳೆಸಿದ್ದಾಳೆ. ಪ್ರತಿ ದಿನ ಕಾಲ್ ಮಾಡಿ ಮಾತನಾಡಲು ಆರಂಭಿಸಿದ್ದಾಳೆ. ಬೇರೆ ಬೇರೆ ಕಾರಣಗಳನ್ನು ಹೇಳಿ ಹಣ ಪೀಕಿದ್ದಾಳೆ. ಆನಂತರ ಮನೆಗೆ ಬರುವಂತೆ ದುಂಬಾಲು ಬಿದ್ದಿದ್ದಾಳೆ.
ಇತ್ತೀಚೆಗೆ ಅಂಕಲ್ ಮಾಗಡಿ ರಸ್ತೆಯಲ್ಲಿ ಹೋಗುತ್ತಿದ್ದ ಸಂದರ್ಭದಲ್ಲಿ ನಯನ ಹಿಂಬಾಲಿಸಿ, ಮಾತನಾಡಿಸಿದ್ದಾಳೆ. ನಂತರ ಟೀ ಕುಡಿಯಲು ಮನೆಗೆ ಬರುವಂತೆ ಒತ್ತಾಯ ಮಾಡಿದ್ದಾಳೆ.
ಸುಂದರಿ ಕರೆದಳು ಅಂತಾ ಅಂಕಲ್ ಮನೆಗೆ ಹೋಗಿದ್ದಾರೆ. ಮನೆಗೆ ಹೋಗುತ್ತಿದ್ದಂತೆ ಅಪರಿಚಿತರು ಪೊಲೀಸರ ವೇಷದಲ್ಲಿ ದಾಳಿ ಮಾಡಿದ್ದಾರೆ. ವ್ಯಭಿಚಾರ ನಡೆಸುತ್ತಿದ್ದೀರಾ? ಎಂದು ಪ್ರಶ್ನಿಸಿ, ಅಂಕಲ್ ಬಟ್ಟೆ ಬಿಚ್ಚಿಸಿ ಹಲ್ಲೆ ಮಾಡಿದ್ದಾರೆ. ಈಗಲೇ ಇಲ್ಲೇ ಸೆಟಲ್ ಮಾಡಿಕೊ, ಇಲ್ಲವಾದರೆ ಪೊಲೀಸ್ ಠಾಣೆಗೆ ಕರೆದೊಯ್ಯುತ್ತೇವೆ ಎಂದು ಹೆದರಿಸಿದ್ದಾರೆ.

ಆನಂತರ ಅಂಕಲ್ ಬಳಿಯಿದ್ದ 29 ಸಾವಿರ ನಗದು, ಫೋನ್ ಪೇನಲ್ಲಿ 26 ಸಾವಿರ ಹಾಗೂ ಮೈ ಮೇಲಿದ್ದ ಸುಮಾರು 5 ಲಕ್ಷ ರೂ. ಮೌಲ್ಯದ ಚಿನ್ನದ ಸರ, ಉಂಗುರ, ಬ್ರಾಸ್ ಲೇಟ್ ಕಿತ್ತುಕೊಂಡು ಪರಾರಿಯಾಗಿದ್ದಾರೆ. ಈ ಘಟನೆ ನಡೆಯುತ್ತಿದ್ದಂತೆ ನಯನಗೆ ಅಂಕಲ್ ದೂರು ನೀಡಲು ಹೇಳಿದ್ದಾರೆ. ಆಗ ನಯನ ವರಸೆ ಬದಲಾಗಿದೆ. ಇದರಿಂದ ಸಂಶಯಗೊಂಡ ಅಂಕಲ್ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಗ್ಯಾಂಗ್ ನ ಸಂತೋಷ್, ಅಜಯ್, ಜಯರಾಜ್ ಎಂಬುವವರನ್ನು ಬಂಧಿಸಿದ್ದಾರೆ. ಪ್ರಮುಖ ಆರೋಪಿ ನಯನ ನಾಪತ್ತೆಯಾಗಿದ್ದಾರೆ.