ಮೈಸೂರು: ಸರ್ಕಾರ ಜಾರಿಗೆ ತಂದಿರುವ ಗೃಹಲಕ್ಷ್ಮಿ ಯೋಜನೆ ಹಲವಾರು ಮಹಿಳೆಯರಿಗೆ ಆಸರೆಯಾಗಿರುವುದು ಇತ್ತೀಚೆಗೆ ವರದಿಯಾಗುತ್ತಲೇ ಇದೆ. ಈಗ ಮಹಿಳೆಯೊಬ್ಬರು ಸರ್ಕಾರ ನೀಡುವ ಮಾಸಿಕ 2 ಸಾವಿರ ರೂ. ಹಣವನ್ನು ಕೂಡಿಸಿಕೊಂಡು ಶೌಚಾಲಯ ನಿರ್ಮಿಸಿಕೊಂಡಿದ್ದಾರೆ.
ಮೈಸೂರು ಜಿಲ್ಲೆಯ ವರುಣಾ ಕ್ಷೇತ್ರದ ರಾಂಪುರದಲ್ಲಿ ಈ ರೀತಿ ಶೌಚಾಲಯ ನಿರ್ಮಿಸಿಕೊಂಡಿದ್ದಾರೆ. ಸಿಎಂ ತವರು ಕ್ಷೇತ್ರದಲ್ಲೇ ಮಹಿಳೆಯೊಬ್ಬರು ಈ ರೀತಿ ಗೃಹಲಕ್ಷ್ಮೀ ಹಣವನ್ನು ಸದುಪಯೋಗ ಪಡಿಸಿಕೊಂಡಿದ್ದಕ್ಕೆ ಎಲ್ಲರೂ ಹುಬ್ಬೇರಿಸುತ್ತಿದ್ದಾರೆ.
ಗ್ರಾಮದ ನಿವಾಸಿ ಮಂಜುಳಾ ಎಂಬುವರು ಟೈಲರಿಂಗ್ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಹೊಲಿಗೆ ಯಂತ್ರ ಖರೀದಿಸುವ ಉದ್ದೇಶದಿಂದ ಪ್ರತಿ ತಿಂಗಳು ಬರುತ್ತಿದ್ದ 2 ಸಾವಿರ ರೂ. ಗೃಹಲಕ್ಷ್ಮಿ ಯೋಜನೆ ಹಣವನ್ನು ಕೂಡಿಟ್ಟಿದ್ದರು. ಈ ಮಧ್ಯೆ ಕುಟುಂಬದ ಬಳಕೆಗೆ ಶೌಚಾಲಯವೇ ಮುಖ್ಯ ಎಂಬುವುದನ್ನು ಅರಿತು ತಾವು ಕೂಡಿಟ್ಟಿದ್ದ ಹಣದಿಂದ ಶೌಚಾಲಯ ನಿರ್ಮಿಸಿಕೊಂಡಿದ್ದಾರೆ.