ಬೆಳಗಾವಿ: ಇತ್ತೀಚೆಗೆ ಗೂಗಲ್ ಮ್ಯಾಪ್ ನಿಂದಾಗಿ ಸಾಕಷ್ಟು ಅವಾಂತರಗಳು ಸೃಷ್ಟಿಯಾಗುತ್ತಿವೆ. ಈಗ ಮತ್ತೊಂದು ಅವಾಂತರ ಬೆಳಕಿಗೆ ಬಂದಿದೆ.
ರಾಜ್ಯದ ಬೆಳಗಾವಿಯ ಖಾನಾಪುರದಲ್ಲಿ ಗೂಗಲ್ ನಿಂದಾಗಿ ಕಾರೊಂದು ಕಾಡಿಗೆ ನುಗ್ಗಿರುವ ಘಟನೆ ನಡೆದಿದೆ. ಆಂಧ್ರ ಪ್ರದೇಶದಿಂದ ಗೋವಾಕ್ಕೆ ಹೊರಟಿದ್ದ ಮಹಿಳೆಯರು ಸೇರಿದಂತೆ ನಾಲ್ವರಿದ್ದ ಕಾರು ಗೂಗಲ್ ಮ್ಯಾಪ್ ತೋರಿದ ಮಾರ್ಗದಲ್ಲಿ ಪ್ರಯಾಣಿಸಿ ದಟ್ಟಾರಣ್ಯ ಸೇರಿದೆ. ಕಾರಿನ ಸಮೇತ ಕಣ್ಮರೆಯಾದವರನ್ನು ಈಗ ಪೊಲೀಸರು ರಕ್ಷಿಸಿದ್ದಾರೆ.
ಕಾರಿನಲ್ಲಿದ್ದವರು ಆಂಧ್ರ ಪ್ರದೇಶದಿಂದ ಗೋವಾಕ್ಕೆ ತೆರಳುತ್ತಿದ್ದರು ಎನ್ನಲಾಗಿದೆ. ಆದರೆ, ಅವರು ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಮಾಡಿಗುಂಜಿ ಹತ್ತಿರ ದಾರಿ ತಪ್ಪಿ, ಗೂಗಲ್ ಮ್ಯಾಪ್ ನಂಬಿ ಕಾಡಿಗೆ ನುಗ್ಗಿದ್ದಾರೆ. ಮಧ್ಯರಾತ್ರಿ ದಾರಿ ತಪ್ಪಿದ ಪ್ರಯಾಣಿಕರು, ಹತ್ತು ಕಿಲೋಮೀಟರ್ ಕಾಡಿನಲ್ಲಿ ಪ್ರಯಾಣಿಸಿದ್ದಾರೆ. ಆಗ ರಸ್ತೆ ಮುಗಿದು ಹಳ್ಳ ಕಾಣಿಸಿದೆ. ಆ ವೇಳೆ ದಾರಿ ತಪ್ಪಿರುವುದು ಮನವರಿಕೆಯಾಗಿದೆ.
ಆನಂತರ ಅವರಿಗೆ ಯಾವ ಕಡೆ ಹೋಗಬೇಕು ಎಂಬುವುದೇ ಗೊತ್ತಾಗಿಲ್ಲ. ಪೊಲೀಸ್ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ತೆರಳಿದ ಪೊಲೀಸ್ ಸಿಬ್ಬಂದಿ, ನಾಲ್ವರನ್ನೂ ಸುರಕ್ಷಿತವಾಗಿ ಕರೆದುಕೊಂಡು ಬಂದಿದ್ದಾರೆ.